HomeGadag Newsಜನರ ಸೇವೆಯಲ್ಲೇ ಸರ್ಕಾರಿ ನೌಕರರ ಜೀವನ ಸಾರ್ಥಕ: ಡಾ. ಬಸವರಾಜ ಬಳ್ಳಾರಿ

ಜನರ ಸೇವೆಯಲ್ಲೇ ಸರ್ಕಾರಿ ನೌಕರರ ಜೀವನ ಸಾರ್ಥಕ: ಡಾ. ಬಸವರಾಜ ಬಳ್ಳಾರಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ನೌಕರರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಅವರ ಕರ್ತವ್ಯಕ್ಕೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಖಜಾನೆ ಇಲಾಖೆ ಹಾಗೂ ಅರಣ್ಯ ಇಲಾಖೆ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಎಸ್.ಎಚ್. ಬಾದನಟ್ಟಿ ಹಾಗೂ ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಎನ್. ಜಯರಾಮ ಅವರ ಸೇವಾ ನಿವೃತ್ತಿ ಅಭಿನಂದನಾ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ. ಸಹನೆ, ಸೌಜನ್ಯ ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಗೌರವ ಮತ್ತು ಆತ್ಮತೃಪ್ತಿ ದೊರೆಯುತ್ತದೆ ಎಂದು ಹೇಳಿದರು.

ಅರಣ್ಯ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಎನ್. ಜಯರಾಮ ಅವರ ಪರಿಸರ ಸೇವೆಯನ್ನು ಶ್ಲಾಘಿಸಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಲಕ್ಷಾಂತರ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಮನೆಯೇ ಸಸ್ಯ ಸಂಗ್ರಹಾಲಯದಂತಿದ್ದು, ಜಿಲ್ಲೆಯ ‘ಸಾಲುಮರದ ತಿಮ್ಮಕ್ಕ’ ಎಂದು ಅವರನ್ನು ಕರೆಯಬಹುದು ಎಂದು ಪ್ರಶಂಸಿಸಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಜುಲೈ 5ರಂದು ಹಾವೇರಿಯಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ರವಿ ಎಲ್. ಗುಂಜಿಕರ್ ಮಾತನಾಡಿ, ಸರ್ಕಾರಿ ನೌಕರರ ಸಂಘವು ಕೇವಲ ವೇತನ ಮತ್ತು ಭತ್ಯೆಗಳಿಗಾಗಿ ಹೋರಾಡುವ ಸಂಘಟನೆಯಲ್ಲ; ನೌಕರರು ಹಾಗೂ ಅವರ ಕುಟುಂಬದ ಹಿತರಕ್ಷಣೆಗೆ ಸದಾ ಬದ್ಧವಾಗಿರುವ ಜವಾಬ್ದಾರಿಯುತ ವೇದಿಕೆಯಾಗಿದೆ ಎಂದು ಹೇಳಿದರು.

ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಪ್ರಾಮಾಣಿಕ ನೌಕರರಿಗೆ ಕಿರುಕುಳ ನೀಡುತ್ತಿರುವುದು ಆತಂಕಕಾರಿ. ಇಂತಹ ಸಂದರ್ಭಗಳಲ್ಲಿ ಸಂಘಟನೆ ಸದಾ ನೌಕರರ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ಖಜಾನೆ ಉಪನಿರ್ದೇಶಕ ಹರಿನಾಥ ಬಾಬು ಮಾತನಾಡಿ, ಉದ್ಯೋಗ ಸಿಗುವುದು ಅದೃಷ್ಟವಾದರೆ, ಗೌರವಯುತ ನಿವೃತ್ತಿ ಪಡೆಯುವುದು ಅದಕ್ಕಿಂತ ದೊಡ್ಡ ಸಾಧನೆ. ಸರ್ಕಾರಿ ಕಚೇರಿಗೆ ಬರುವ ಪ್ರತಿಯೊಬ್ಬ ನಾಗರಿಕನು ತನ್ನ ಕೆಲಸ ಶೀಘ್ರ ಆಗಬೇಕು ಮತ್ತು ಗೌರವ ಸಿಗಬೇಕು ಎಂಬ ನಿರೀಕ್ಷೆಯೊಂದಿಗೆ ಬರುತ್ತಾನೆ. ಆ ನಿರೀಕ್ಷೆ ಈಡೇರಿಸಿದಾಗ ಮಾತ್ರ ಸರ್ಕಾರಿ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸೇವಾ ನಿವೃತ್ತರಾದ ಎಸ್.ಎಚ್. ಬಾದನಟ್ಟಿ ಮತ್ತು ಎನ್. ಜಯರಾಮ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಖಜಾನೆ ಇಲಾಖೆಯ ದೇವಪ್ಪ ನಾಯಕ್ ಹಾಗೂ ತೋಟಗಾರಿಕೆ ಇಲಾಖೆಯ ವೀರಪ್ಪ ಕುಂಬಾರ ಅವರನ್ನೂ ಅಭಿನಂದಿಸಲಾಯಿತು.

ಕ್ರೀಡಾ ಕಾರ್ಯದರ್ಶಿ ಐ.ಎ. ಗಾಡಗೋಳಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಮುತ್ತು ವೈ. ಮಲಕಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಮೀರ ನಾಯಕ ವಂದಿಸಿದರು.

ಕಾರ್ಯಕ್ರಮದಲ್ಲಿ ನರಗುಂದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ, ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್. ಪಾರ್ವತಿಮಠ, ಜಿಲ್ಲಾ ನಿರ್ದೇಶಕ ರಾಜಕುಮಾರ ಸೊಪ್ಪಡ್ಲ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಎಫ್.ಜೆ. ದಲಬಂಜನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ಕುಟುಂಬ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಸರ್ಕಾರಿ ಸೇವೆ ಎಂದರೆ ಕೇವಲ ಹುದ್ದೆಯಲ್ಲ, ಜನರ ವಿಶ್ವಾಸವನ್ನು ಉಳಿಸುವ ಜವಾಬ್ದಾರಿ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಸೇವೆ ಸಲ್ಲಿಸಿದಾಗಲೇ ನೌಕರನ ಜೀವನ ಸಾರ್ಥಕವಾಗುತ್ತದೆ.”

– ಡಾ. ಬಸವರಾಜ ಬಳ್ಳಾರಿ

ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img