HomeGadag Newsಮತದಾರರ ಜಾಗೃತಿಗೆ ಬೈಕ್ ರ‍್ಯಾಲಿ ಸದ್ದು

ಮತದಾರರ ಜಾಗೃತಿಗೆ ಬೈಕ್ ರ‍್ಯಾಲಿ ಸದ್ದು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರಗುಂದ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್-2026) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಪಂಚಾಯಿತಿ, ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶುಕ್ರವಾರ ನರಗುಂದ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ಹಾಗೂ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.

ನಗರದ ಉಡುಚಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿಯು ದಂಡಾಪೂರ ರಸ್ತೆ, ಮುಖ್ಯ ಮಾರುಕಟ್ಟೆ ರಸ್ತೆ, ಗಾಂಧಿ ಚೌಕ್ ಹಾಗೂ ಬಸವೇಶ್ವರ ಸರ್ಕಲ್ ಮೂಲಕ ಸಂಚರಿಸಿ, ವಿಜಯಪುರ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಶಿವಾಜಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸಮಾರೋಪಗೊಂಡಿತು. ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜಾಗೃತಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ, ಜೂನ್ 30ರಿಂದ ಜುಲೈ 29ರವರೆಗೆ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾರ್ವಜನಿಕರು ಅಗತ್ಯ ದಾಖಲೆಗಳು ಹಾಗೂ ನಿಖರ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಅಗತ್ಯ ನಮೂನೆಗಳನ್ನು ಭರ್ತಿ ಮಾಡಿ ಸ್ವೀಕೃತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಸುಭಾಷ್ ಕುದಾನಪುರ ಮಾತನಾಡಿ, ಸ್ವೀಪ್ ಸಮಿತಿ ವತಿಯಿಂದ ಶಾಲಾ-ಕಾಲೇಜುಗಳು, ಗ್ರಾಮೀಣ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅರ್ಹ ನಾಗರಿಕರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ವಿವಿಧ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಸಂಗಮೇಶ ಬ್ಯಾಳಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವೀಪ್ ಸಮಿತಿ ಸದಸ್ಯರು ಭಾಗವಹಿಸಿದ್ದರು.

“ನಿಖರ ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಭದ್ರ ಅಡಿಪಾಯ. ಪ್ರತಿಯೊಬ್ಬ ಅರ್ಹ ನಾಗರಿಕರು ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ನೀಡಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಹಕರಿಸಬೇಕು.”

– ಶ್ರೀಧರ್ ಚಿನಗುಂಡಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ ನರಗುಂದ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img