ಶಿವಮೊಗ್ಗ: ಹೊಸನಗರ ತಾಲೂಕಿನ ತಾರಿಗ ಗ್ರಾಮ ಮಾರ್ಗದಲ್ಲಿ ಇಂದು ಭೀಕರ ಘಟನೆ ಸಂಭವಿಸಿದೆ.
ಚಲಿಸುತ್ತಿದ್ದ ಬೈಕ್ ಮೇಲೆ ರಸ್ತೆ ಬದಿಯ ಒಣಮರದ ರೆಂಬೆ ಮುರಿದು ಬಿದ್ದ ಪರಿಣಾಮ 26 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತರನ್ನು ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ಸಂತೋಷ್ (26) ಎಂದು ಗುರುತಿಸಲಾಗಿದೆ. ಬೈಕ್ನಲ್ಲಿದ್ದ ಮತ್ತೊಬ್ಬ ಯುವಕ ವೀರಭದ್ರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಇಬ್ಬರೂ ಮೀನು ಹಿಡಿಯಲು ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಬೈಕ್ನಲ್ಲಿ ತಾರಿಗ ಗ್ರಾಮದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಸುಮಾರು 50 ಅಡಿ ಎತ್ತರದ ಒಣಮರದ ದೊಡ್ಡ ರೆಂಬೆ ಏಕಾಏಕಿ ಮುರಿದು ಅವರ ಬೈಕ್ ಮೇಲೆ ಬಿದ್ದಿದೆ.
ರೆಂಬೆ ಬಿದ್ದ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ. ಇದರಿಂದ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ನಂತರ ರಿಪ್ಪನ್ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



