ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಮಹತ್ವದ ಸಿಹಿಸುದ್ದಿ ಸಿಕ್ಕಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ (KOA) ಕಳೆದ ನಾಲ್ಕು ವರ್ಷಗಳಿಂದ ನಡೆಸಿದ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ. ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2ರಷ್ಟು ಮೀಸಲಾತಿ ನೀಡುವ ಆದೇಶವನ್ನು ಸೋಮವಾರ ಪ್ರಕಟಿಸಿದೆ.
ಕ್ರೀಡೆಯಲ್ಲಿ ಸಾಧನೆ ಮಾಡಿರುವವರಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿ ನೀಡುವ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ) ನೇಮಕಾತಿ (ತಿದ್ದುಪಡಿ) ನಿಯಮಗಳು, 2026ಕ್ಕೆ ಈಗಾಗಲೇ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಇದೀಗ ಸರ್ಕಾರ ಅಧಿಕೃತವಾಗಿ ಮೀಸಲಾತಿ ಆದೇಶವನ್ನು ಪ್ರಕಟಿಸಿದೆ.
ಇದರ ಜೊತೆಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ನೀಡುವ ಆದೇಶವೂ ಪ್ರಕಟವಾಗಿದ್ದು, ರಾಜ್ಯದ ಕ್ರೀಡಾಪಟುಗಳಲ್ಲಿ ಸಂತಸ ಮೂಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಕ್ರೀಡಾಪಟುಗಳು ಹಾಗೂ ಕ್ರೀಡಾ ಕ್ಷೇತ್ರದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಒಲಿಂಪಿಕ್ ಸಂಸ್ಥೆ (KOA) ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹಾಗೂ FIBA ಅಧ್ಯಕ್ಷ ಡಾ. ಕೆ. ಗೋವಿಂದರಾಜ್ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಡೆಸಿದ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ದೊರೆಯಬೇಕು ಎಂಬುದು ತಮ್ಮ ಬಹುಕಾಲದ ಕನಸಾಗಿತ್ತು. ಇದೀಗ ಸರ್ಕಾರ ಶೇ.2ರಷ್ಟು ಮೀಸಲಾತಿ ಪ್ರಕಟಿಸುವ ಮೂಲಕ ಬೇಡಿಕೆಗೆ ಸ್ಪಂದಿಸಿದೆ. ಅರಣ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಮೀಸಲಾತಿ ನೀಡಿರುವುದಕ್ಕೂ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಡಾ. ಕೆ. ಗೋವಿಂದರಾಜ್ ತಿಳಿಸಿದ್ದಾರೆ.
ಕ್ರೀಡಾಪಟುಗಳ ಹಿತದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರವು ರಾಜ್ಯದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸರ್ಕಾರದ ಆದೇಶದಿಂದ ಕ್ರೀಡೆಯಲ್ಲಿ ಸಾಧನೆ ಮಾಡುವ ಯುವಜನರಿಗೆ ಸರ್ಕಾರಿ ಉದ್ಯೋಗದ ಅವಕಾಶಗಳಲ್ಲೂ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಿದೆ.
ಈ ಮಹತ್ವದ ನಿರ್ಧಾರಕ್ಕೆ ಸಹಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಅಧಿಕಾರಿಗಳಿಗೆ ಡಾ. ಕೆ. ಗೋವಿಂದರಾಜ್ ಧನ್ಯವಾದ ಸಲ್ಲಿಸಿದ್ದಾರೆ.



