ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗಾಗಿ ಶನಿವಾರ ಶಿರಹಟ್ಟಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ, ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳ ಬಿತ್ತನೆ ಆಗಿಲ್ಲ ಎಂದು ಮಾಹಿತಿ ನೀಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಎ.ಎ. ಕಂಬಾಳಿಮಠ, “ಜಿಲ್ಲಾ ಮಟ್ಟದ ಜಂಟಿ ನಿರ್ದೇಶಕರು ಬಿತ್ತನೆಯಾಗಿದೆ ಎಂದು ವರದಿ ನೀಡಿದ್ದಾರೆ. ಹಾಗಾದರೆ ಸರಿಯಾದ ಮಾಹಿತಿ ಯಾವುದು? ಅಧಿಕಾರಿಗಳು ಸಭೆಗೆ ಬರುವಾಗ ಸಂಪೂರ್ಣ ಹಾಗೂ ನಿಖರ ಅಂಕಿ-ಅಂಶಗಳೊಂದಿಗೆ ಹಾಜರಾಗಬೇಕು. ಹಾರಿಕೆ ಅಂಕಿ-ಅಂಶಗಳನ್ನು ನೀಡಬಾರದು,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಜೂನ್ 1ರಿಂದ ಜುಲೈ 4ರವರೆಗೆ 102 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 78 ಮಿ.ಮೀ. ಮಾತ್ರ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಮಾಹಿತಿ ನೀಡಿದರು. ಈಗಾಗಲೇ 2,200 ಹೆಕ್ಟೇರ್ ಹೆಸರು ಹಾಗೂ 27,000 ಹೆಕ್ಟೇರ್ ಗೋವಿನಜೋಳ ಬಿತ್ತನೆಯಾಗಿದ್ದು, 385 ಟನ್ ಯೂರಿಯಾ ಮತ್ತು 38 ಟನ್ ಡಿಎಪಿ ಗೊಬ್ಬರ ಸಂಗ್ರಹವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂಬಾಳಿಮಠ, ಕಡಿಮೆ ಮಳೆಯ ಹಿನ್ನೆಲೆಯಲ್ಲಿ ಬೆಳೆ ಹಾನಿಯಾಗದಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಬೆಳೆ ವಿಮೆ ನೋಂದಣಿ ಕುರಿತು ವ್ಯಾಪಕ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ, ಯೋಜನಾಧಿಕಾರಿ ಎಚ್.ಎ. ಕೊಂಡಿಕೊಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



