ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಖಾಸಗಿ ಬಸ್ವೊಂದು ಕಂಟೇನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ಪಲ್ಟಿಯಾಗಿ, ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡ ಘಟನೆ ರಾಮನಗರ ಜಿಲ್ಲೆಯ ವಡ್ಡರದೊಡ್ಡಿ ಗ್ರಾಮದ ಸಮೀಪ ನಡೆದಿದೆ.
ಮೈಸೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಕಂಟೇನರ್ ಲಾರಿಯನ್ನು ಓವರ್ಟೇಕ್ ಮಾಡಲು ಖಾಸಗಿ ಬಸ್ ಚಾಲಕ ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಕಂಟೇನರ್ ರಸ್ತೆ ಮೇಲೆಯೇ ಪಲ್ಟಿಯಾಗಿದ್ದು, ಬಸ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆ ಕಂಡು ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ರಾಮನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.



