ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಮಾಯಕ ರೈತರನ್ನು ದಾರಿ ತಪ್ಪಿಸಿ ಬೆಳೆ ವಿಮೆ ನೋಂದಣಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಕೂಡಲೇ ಖಾಸಗಿ ಪಿಆರ್ಓಗಳನ್ನು (PRO) ಬದಲಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರವಿವಾರ ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಬರಗಾಲ ಹಾಗೂ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ವಿಮೆಯಲ್ಲಿ ಮಧ್ಯವರ್ತಿಗಳು ಹಾಗೂ ಕೆಲವು ಪಿಆರ್ಓಗಳು ಸೇರಿಕೊಂಡು ಒಂದು ಬೆಳೆ ಬದಲಿಗೆ ಮತ್ತೊಂದು ಬೆಳೆ ದಾಖಲಿಸುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕಾರಣದಿಂದ ರೈತರ ಮನೆ ಬಾಗಿಲಿಗೆ ಹೋಗಿ ಗಲಾಟೆ ಮಾಡುವ ಪ್ರಕರಣಗಳೂ ಹೆಚ್ಚುತ್ತಿವೆ. ಕೃಷಿ ಇಲಾಖೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಬೆಳೆ ಸಮೀಕ್ಷೆಯನ್ನು ಅತ್ಯಂತ ನಿಖರವಾಗಿ ನಡೆಸಬೇಕು. ಗ್ರಾಮ ಪಂಚಾಯಿತಿ ಮಟ್ಟದ ಮಳೆಮಾಪನ ಕೇಂದ್ರಗಳಲ್ಲಿಯೂ ಕಾಟಾಚಾರದ ಮಾಹಿತಿ ದಾಖಲಿಸದೆ ವಾಸ್ತವ ಅಂಕಿ-ಅಂಶಗಳನ್ನು ದಾಖಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಪಟ್ಟಣಗಳ ಸ್ವಚ್ಛತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಲಕ್ಷ್ಮೇಶ್ವರದಲ್ಲಿ ಸ್ವತಃ ಭೇಟಿ ನೀಡಿದಾಗ ಸಿಬ್ಬಂದಿ ಗೈರುಹಾಜರಾಗಿದ್ದು, ಹಣಕಾಸು ಬಳಕೆ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ. ಶಿರಹಟ್ಟಿಯಲ್ಲಿಯೂ ಸ್ವಚ್ಛತೆ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದು, ಪ್ರತಿ ವಾರ್ಡ್ನಲ್ಲಿ ತಿಂಗಳಿಗೆ ಕನಿಷ್ಠ ಎರಡು-ಮೂರು ಬಾರಿ ಸ್ವಚ್ಛತಾ ಕಾರ್ಯ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಿರಹಟ್ಟಿಯಲ್ಲಿ ನಿರ್ಮಾಣವಾಗುತ್ತಿರುವ 100 ಹಾಸಿಗೆಗಳ ಆಸ್ಪತ್ರೆಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ಲೈನ್ ಕಲ್ಪಿಸುವಂತೆ ಸೂಚಿಸಿದರು.
ಬೆಳ್ಳಟ್ಟಿ ಗ್ರಾಮದಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದ ಬೂದು ನೀರು ನಿರ್ವಹಣಾ ಯೋಜನೆ ಕಾಮಗಾರಿ ತಮ್ಮ ಗಮನಕ್ಕೆ ತಾರದೆ ಆರಂಭಿಸಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ನಿರ್ವಹಣೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಅವರಿಗೆ ಸೂಚಿಸಿದರು.
ಬೆಳ್ಳಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ಪೀಟ್ ಮತ್ತು ಓಸಿ ಜೂಜಾಟ ನಡೆಯುತ್ತಿರುವ ಕುರಿತು ಮಾಹಿತಿ ಹಾಗೂ ವಿಡಿಯೊಗಳು ತಮ್ಮ ಬಳಿ ಇರುವುದಾಗಿ ತಿಳಿಸಿದ ಶಾಸಕರು, ಹೊರ ಜಿಲ್ಲೆಗಳಿಂದಲೂ ಜನರು ಬಂದು ಜೂಜಾಟದಲ್ಲಿ ತೊಡಗುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿರಹಟ್ಟಿ ಪಿಎಸ್ಐ ಈರಪ್ಪ ರಿತ್ತಿ ಅವರಿಗೆ ಸೂಚಿಸಿದರು.
ಗದಗ–ಹೊನ್ನಾಳಿ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಶೀಘ್ರದಲ್ಲೇ ನಡೆಯಲಿರುವ ಸಭೆಯಲ್ಲಿ ಪೊಲೀಸ್ ಇಲಾಖೆ ಅಗತ್ಯ ಸುರಕ್ಷತಾ ಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಶಿರಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರರಾವ್, ಶಿರಹಟ್ಟಿ ತಾಪಂ ಇಒ ಆರ್.ವಿ. ದೊಡ್ಡಮನಿ, ಲಕ್ಷ್ಮೇಶ್ವರ ತಾಪಂ ಇಒ ಮಂಜುಳಾ ಹಕಾರಿ, ಮುಂಡರಗಿ ತಾಪಂ ಇಒ ಬೆಣ್ಣಿ ಹಾಗೂ ಮೂರು ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಬೆಳೆ ವಿಮೆಯಲ್ಲಿ ರೈತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಪಿಆರ್ಓಗಳ ಪಾತ್ರವನ್ನು ಪರಿಶೀಲಿಸಿ, ಅಗತ್ಯವಿದ್ದರೆ ತಕ್ಷಣವೇ ಬದಲಾವಣೆ ಮಾಡಬೇಕು. ಬೆಳೆ ಸಮೀಕ್ಷೆ ಮತ್ತು ಮಳೆ ದಾಖಲೆಗಳು ಸಂಪೂರ್ಣ ನಿಖರವಾಗಿರಬೇಕು.”
ಡಾ. ಚಂದ್ರು ಲಮಾಣಿ, ಶಾಸಕ



