ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಗದುಗಿನ ಸಿದ್ಧರಾಮೇಶ್ವರ ನಗರದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅವರು, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ವೈದ್ಯ ಡಾ. ಬಿ.ಸಿ. ರಾಯ್ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ವೈದ್ಯಕೀಯ ಸೇವೆ ಎಂದರೆ ಕೇವಲ ವೃತ್ತಿಯಲ್ಲ, ಅದು ಮಾನವೀಯ ಸೇವೆಯಾಗಿದೆ ಎಂದು ಹೇಳಿದರು.
ರೋಗಿಗಳಿಗೆ ಔಷಧೋಪಚಾರ ನೀಡುವ ವೈದ್ಯರು ದೇಹದ ಕಾಯಿಲೆಗಳನ್ನು ಗುಣಪಡಿಸುತ್ತಾರೆ. ಆದರೆ ಇಂದಿನ ಬಹುತೇಕ ಕಾಯಿಲೆಗಳ ಮೂಲ ಮನಸ್ಸಿನ ಒತ್ತಡ, ಭಯ, ಆತಂಕ ಹಾಗೂ ಅಶಾಂತಿಯಾಗಿರುವುದರಿಂದ ವೈದ್ಯರು ದೈಹಿಕ ಚಿಕಿತ್ಸೆಯ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ರಾಜಯೋಗ ಧ್ಯಾನದಂತಹ ಆಧ್ಯಾತ್ಮಿಕ ವಿಧಾನಗಳು ರೋಗಿಗಳ ಮನಸ್ಸಿಗೆ ನೆಮ್ಮದಿ ನೀಡುವಲ್ಲಿ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಈಶ್ವರೀಯ ವಿಶ್ವ ವಿದ್ಯಾಲಯ ಆತ್ಮದಲ್ಲಿರುವ ಕ್ರೋಧ, ಲೋಭ, ಅಹಂಕಾರ, ಈರ್ಷೆ, ದ್ವೇಷದಂತಹ ನಕಾರಾತ್ಮಕ ಗುಣಗಳನ್ನು ದೂರ ಮಾಡುವ ಮೂಲಕ ಆಂತರಿಕ ಆರೋಗ್ಯವನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ವೈದ್ಯರು ಈ ಜ್ಞಾನವನ್ನು ಅಳವಡಿಸಿಕೊಂಡರೆ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಜಯಕುಮಾರ್ ಬ್ಯಾಳಿ, ಡಾ. ತುಕಾರಾಂ ಸೋರಿ, ಡಾ. ಸಿ.ಬಿ. ಹಿರೇಗೌಡರ್, ಡಾ. ವೆಂಕಟೇಶ್ ಪೂಜಾರ್, ಡಾ. ಈರಣ್ಣ ಹಳೇಮನಿ, ಡಾ. ರಶ್ಮಿ ವಾದೋನಿ, ಡಾ. ಬಸವರಾಜ್ ಚನ್ನಪ್ಪಗೌಡ್ರ, ಡಾ. ಜಿ. ನಾಗರಾಳ, ಡಾ. ಅಶೋಕ್ ಮತ್ತಿಗಟ್ಟಿ, ಡಾ. ಉಮೇಶ್ ಹಾದಿ, ಡಾ. ಸವಿತಾ ನಿಡಗುಂದಿ, ಡಾ. ಸಾಯಿಪ್ರಕಾಶ್ ಮಡಿವಾಳರ್, ಡಾ. ರೋಹಿತ್ ಹಾಗೂ ಡಾ. ಮೇಘಾ ಕೊಪ್ಪಳಕರ್ ಸೇರಿದಂತೆ ಅನೇಕ ವೈದ್ಯರು ಸನ್ಮಾನ ಸ್ವೀಕರಿಸಿದರು.
ಬಿ.ಕೆ. ರೇಖಾ ಸ್ವಾಗತಿಸಿದರು. ಬಿ.ಕೆ. ಸಾವಿತ್ರಿ ವಂದಿಸಿದರು.
“ವೈದ್ಯರು ಕೇವಲ ದೇಹದ ಕಾಯಿಲೆ ಗುಣಪಡಿಸುವ ‘ಡಾಕ್ಟರ್’ ಆಗಿರಬಾರದು. ರೋಗಿಯ ಮನಸ್ಸಿನ ನೋವು, ಆತಂಕ, ಒತ್ತಡವನ್ನೂ ದೂರ ಮಾಡುವ ‘ಡಬಲ್ ಡಾಕ್ಟರ್’ ಆದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ.”
ಬ್ರಹ್ಮಕುಮಾರಿ ಜಯಂತಿ, ಈಶ್ವರೀಯ ವಿಶ್ವ ವಿದ್ಯಾಲಯ



