ಬೆಂಗಳೂರು: ಮೂರು ವರ್ಷಗಳ ಪ್ರೀತಿಯನ್ನು ತೊರೆದು ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದ್ದ ಪ್ರೇಯಸಿಗೆ ಯುವಕನೊಬ್ಬ ಚಾಕುವಿನಿಂದ ಇರಿದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ನರಸಾಪುರ ಮೂಲದ ನವಾಜ್ ಎಂಬ ಯುವಕ, ಪಶ್ಚಿಮ ಬಂಗಾಳ ಮೂಲದ ನಂದಿನಿ ದಾಸ್ ಎಂಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ, ನಂದಿನಿ ದಾಸ್ ನವಾಜ್ನಿಂದ ದೂರವಾಗಿ ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡ ನವಾಜ್ ಯಾರೂ ಇಲ್ಲದ ವೇಳೆ ಯುವತಿಯ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಬಳಿಕ ಆರೋಪಿ ನವಾಜ್ ಕೂಡ ತನ್ನ ಕತ್ತಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



