ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಭದ್ರತೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಿಬಿ-ಜಿ ರಾಮ್ (ಜಿ) – ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ ಯೋಜನೆಗೆ ಗದಗ ಜಿಲ್ಲೆಯಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಗೆ ಪರ್ಯಾಯವಾಗಿ ಜಾರಿಯಾಗುತ್ತಿರುವ ಈ ಯೋಜನೆ ಗ್ರಾಮೀಣ ಕಾರ್ಮಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ನರೇಗಾ ಯೋಜನೆಯಡಿ ಸುಮಾರು 1.63 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಅವುಗಳಲ್ಲಿ 1.13 ಲಕ್ಷ ಕುಟುಂಬಗಳು ಸಕ್ರಿಯವಾಗಿವೆ. ಆರಂಭಿಕ ಹಂತದಲ್ಲಿ ಈ ಸಕ್ರಿಯ ಕಾರ್ಮಿಕರಿಗೆ ಈಗಿರುವ ಜಾಬ್ ಕಾರ್ಡ್ಗಳ ಆಧಾರದಲ್ಲೇ ಕೆಲಸ ನೀಡಲಾಗುತ್ತದೆ. ಬಳಿಕ ಎಲ್ಲ ಅರ್ಹ ಕಾರ್ಮಿಕರಿಗೆ ‘ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್’ ವಿತರಿಸಲಾಗುತ್ತದೆ. ಇದುವರೆಗೆ ಯಾವುದೇ ಯೋಜನೆಯಲ್ಲಿ ನೋಂದಣಿಯಾಗದ ಗ್ರಾಮೀಣ ಕಾರ್ಮಿಕರು ಹಾಗೂ ಯುವಕರಿಗೂ ಹೊಸದಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ಏಳು ತಾಲೂಕುಗಳ 122 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಯನ್ನು ಏಕಕಾಲದಲ್ಲಿ ಜಾರಿಗೊಳಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಆಯುಕ್ತಾಲಯದ ಮಾರ್ಗಸೂಚಿಯಂತೆ ಕ್ರಿಯಾ ಯೋಜನೆ ರೂಪಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಇದು ಹಿಂದಿನ ಕೂಲಿಗಿಂತ ಹೆಚ್ಚಾಗಿದೆ. ಗ್ರಾಮದಲ್ಲಿಯೇ ಉದ್ಯೋಗ ಲಭ್ಯವಾಗುವುದರಿಂದ ಕೆಲಸಕ್ಕಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ.
ಹೊಸ ಯೋಜನೆಯಡಿ ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಅಭಿವೃದ್ಧಿ, ಹವಾಮಾನ ಬದಲಾವಣೆಗೆ ಹೊಂದಿಕೊಂಡ ಕಾಮಗಾರಿಗಳು ಸೇರಿದಂತೆ 318 ಮಾದರಿಯ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮಸಭೆಯಲ್ಲಿ ಸಿದ್ಧವಾಗುವ ‘ವಿಕಸಿತ ಗ್ರಾಮ ಪಂಚಾಯಿತಿ ಪ್ಲಾನ್’ ಆಧಾರವಾಗಿ ಶಾಲೆ, ಅಂಗನವಾಡಿ, ಆಸ್ಪತ್ರೆ, ಹಾಲು ಉತ್ಪಾದಕರ ಡೈರಿ, ಧಾನ್ಯ ಸಂಗ್ರಹಣಾ ಘಟಕ, ಗ್ರಂಥಾಲಯ, ಸಮುದಾಯ ಗೋದಾಮು ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಹಲವು ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಅನುದಾನ ನೀಡಲಿದ್ದು, ಯೋಜನೆ ಜಾರಿಯಾದ ಬಳಿಕ ಗ್ರಾಮೀಣ ಉದ್ಯೋಗ ಸೃಷ್ಟಿಯ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ವೇಗ ಸಿಗುವ ನಿರೀಕ್ಷೆಯಿದೆ.
“ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸುವ ಕೆಲಸ ನಡೆಯುತ್ತಿದ್ದು, ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದೇವೆ.”
– ಸಿ.ಆರ್. ಮುಂಡರಗಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಗದಗ



