HomeKarnataka Newsತುಮಕೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೆಂಗಳೂರು–ಮೈಸೂರುವರೆಗೆ ಹರಡಿದ್ದ ಖೋಟಾ ನೋಟಿನ ಜಾಲ ಪತ್ತೆ

ತುಮಕೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೆಂಗಳೂರು–ಮೈಸೂರುವರೆಗೆ ಹರಡಿದ್ದ ಖೋಟಾ ನೋಟಿನ ಜಾಲ ಪತ್ತೆ

For Dai;y Updates Join Our whatsapp Group

ತುಮಕೂರು: ಸಿನಿಮಾ ಕಥೆ ಹಾಗೂ ಕ್ರೈಂ ವೆಬ್‌ಸೀರಿಸ್‌ಗಳನ್ನೂ ಮೀರಿಸುವ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ರಾಜ್ಯವ್ಯಾಪಿ ಹರಡಿದ್ದ ಖೋಟಾ ನೋಟಿನ ಜಾಲವನ್ನು ಭೇದಿಸಿದ್ದಾರೆ.

ಕೇವಲ ಒಂದೇ ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ನೋಟುಗಳ ಮುದ್ರಣ, ಮಾರಾಟ ಹಾಗೂ ಚಲಾವಣೆಯ ವ್ಯವಸ್ಥಿತ ಜಾಲವನ್ನು ಪತ್ತೆಹಚ್ಚಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 500 ರೂಪಾಯಿ ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಂದು ನೋಟಿನಿಂದ ಆರಂಭವಾದ ತನಿಖೆ:

ಹುಳಿಯಾರು ಪಟ್ಟಣದ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸಿಗರೇಟ್ ಖರೀದಿಸಿ 500 ರೂಪಾಯಿ ನಕಲಿ ನೋಟು ನೀಡಿ ತೆರಳಿದ್ದರು. ನೋಟಿನ ಬಗ್ಗೆ ಅನುಮಾನಗೊಂಡ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಪೊಲೀಸರು ತನಿಖೆ ಆರಂಭಿಸಿದರು. ಒಂದು ನಕಲಿ ನೋಟಿನ ಸುಳಿವನ್ನು ಬೆನ್ನತ್ತಿದ ಪೊಲೀಸರು, ಅದರ ಮೂಲವನ್ನು ಪತ್ತೆಹಚ್ಚಲು ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದರು.

ತನಿಖೆ ಮುಂದುವರಿದಂತೆ ನಕಲಿ ನೋಟುಗಳ ತಯಾರಿಕೆ, ಮಾರಾಟ ಮತ್ತು ಸಾರ್ವಜನಿಕರ ನಡುವೆ ಚಲಾವಣೆ ಮಾಡುವ ಪ್ರತ್ಯೇಕ ವ್ಯವಸ್ಥೆಯೇ ಇರುವುದು ಪೊಲೀಸರ ಗಮನಕ್ಕೆ ಬಂದಿದೆ.

ನಕಲಿ ನೋಟು ಜಾಲ ಹೇಗೆ ಕಾರ್ಯನಿರ್ವಹಿಸುತ್ತಿತ್ತು?

ಪೊಲೀಸರ ತನಿಖೆಯಲ್ಲಿ ಬೆಂಗಳೂರಿನ ರುದ್ರೇಶ್ ಎಂಬಾತ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಮೈಸೂರಿನ ರವಿ ನಕಲಿ ನೋಟುಗಳನ್ನು ಮಾರಾಟ ಮಾಡುವ ಜವಾಬ್ದಾರಿ ವಹಿಸಿದ್ದ ಎನ್ನಲಾಗಿದೆ.

ಅನಂತಪುರದ ಕುಬೇರಪ್ಪ ಹಾಗೂ ಹನುಮಂತಪ್ಪ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಂದ ನಕಲಿ ನೋಟುಗಳನ್ನು ಪಡೆದುಕೊಳ್ಳುತ್ತಿದ್ದ ವೆಂಕಟೇಶ್ ಮತ್ತು ತಿಲಕ್ ಕುಮಾರ್ ಅವುಗಳನ್ನು ಸಾರ್ವಜನಿಕರ ನಡುವೆ ಚಲಾವಣೆ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

60ಕ್ಕೂ ಹೆಚ್ಚು ನಕಲಿ ನೋಟು ವಶ

ಬಂಧಿತರಿಂದ 500 ರೂಪಾಯಿ ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ವಸ್ತುಗಳು ಹಾಗೂ ಇತರ ದಾಖಲೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಈ ಜಾಲ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಿರುವ ಸಾಧ್ಯತೆ ಇದ್ದು, ಇನ್ನಷ್ಟು ಮಂದಿ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ದೊಡ್ಡ ಜಾಲದ ಬೇರು ಪತ್ತೆಗೆ ತನಿಖೆ ಚುರುಕು

ನಕಲಿ ನೋಟುಗಳ ಜಾಲದ ಹಿಂದೆ ಇರುವ ಪ್ರಮುಖ ವ್ಯಕ್ತಿಗಳು ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತರ ವಿಚಾರಣೆ ಮೂಲಕ ಜಾಲದ ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತಿದೆ.

ಒಂದು ಸಣ್ಣ ಸುಳಿವಿನಿಂದ ಆರಂಭವಾದ ತನಿಖೆ, ರಾಜ್ಯಮಟ್ಟದ ಖೋಟಾ ನೋಟು ಜಾಲವನ್ನು ಬಯಲಿಗೆಳೆದಿರುವುದು ಪೊಲೀಸರ ಕಾರ್ಯಾಚರಣೆಯ ಮಹತ್ವವನ್ನು ತೋರಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img