ಬೆಂಗಳೂರು: ಹೈಕೋರ್ಟ್ನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಾವಿರಾರು ಸಿವಿಲ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಮಹತ್ವದ ಕಾನೂನು ತಿದ್ದುಪಡಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಈ ತೀರ್ಪಿನಿಂದ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಗಳ ಆದೇಶಗಳ ವಿರುದ್ಧ ಸಲ್ಲಿಸುವ ಪ್ರಥಮ ಮೇಲ್ಮನವಿಗಳನ್ನು ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಕಾನೂನುಬದ್ಧ ಮಾನ್ಯತೆ ದೊರೆತಿದೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಕರ್ನಾಟಕ ಹೈಕೋರ್ಟ್ (ತಿದ್ದುಪಡಿ) ಕಾಯ್ದೆ–2023’ ಹಾಗೂ ‘ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ಕಾಯ್ದೆ–2023’ ಸಂವಿಧಾನಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಇಟ್ಟಸಂದ್ರ ಗ್ರಾಮದ ನಾರಾಯಣಮ್ಮ ಹಾಗೂ ರಾಯಚೂರಿನ ಬಾಬುರಾವ್ ಸೇರಿದಂತೆ ಇತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ತಿದ್ದುಪಡಿ ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ.
ಪ್ರಸ್ತುತ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಸಾವಿರಾರು ಪ್ರಥಮ ಮೇಲ್ಮನವಿಗಳು ಬಾಕಿ ಇರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ಈ ತಿದ್ದುಪಡಿಯಿಂದ ರಾಜ್ಯದ ಸುಮಾರು 200 ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಇಂತಹ ಮೇಲ್ಮನವಿಗಳ ವಿಚಾರಣೆ ನಡೆಸಲು ಅವಕಾಶ ಸಿಗಲಿದೆ ಎಂದು ತಿಳಿಸಿದೆ.
ನ್ಯಾಯದಾನವನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಮೇಲ್ಮನವಿಗಳ ವಿಚಾರಣಾ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವುದು ಕಾಲದ ಅಗತ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇನ್ನು ಮುಂದೆ ಜಿಲ್ಲೆ ಹಾಗೂ ತಾಲೂಕುಗಳ ಹಿರಿಯ ಸಿವಿಲ್ ನ್ಯಾಯಾಧೀಶರು ನೀಡುವ ಆದೇಶಗಳ ವಿರುದ್ಧದ ಪ್ರಥಮ ಮೇಲ್ಮನವಿಗಳನ್ನು ನೇರವಾಗಿ ಹೈಕೋರ್ಟ್ಗೆ ಸಲ್ಲಿಸಲು ಅವಕಾಶ ಇರುವುದಿಲ್ಲ. ಅಂತಹ ಮೇಲ್ಮನವಿಗಳನ್ನು ಸಂಬಂಧಿತ ಜಿಲ್ಲಾ ನ್ಯಾಯಾಲಯಗಳೇ ವಿಚಾರಣೆ ನಡೆಸಲಿವೆ. ಆದರೆ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಗಳ ಆದೇಶಗಳ ವಿರುದ್ಧದ ಮೇಲ್ಮನವಿಗಳು ಎಂದಿನಂತೆ ಹೈಕೋರ್ಟ್ನ ಪ್ರಧಾನ ಪೀಠದಲ್ಲೇ ವಿಚಾರಣೆಗೆ ಒಳಪಡಲಿವೆ.
ಈ ಪ್ರಕರಣದ ಸಂಬಂಧ ಏಕಸದಸ್ಯ ಪೀಠವು ತಿದ್ದುಪಡಿ ಕಾಯ್ದೆಗೆ 2007ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ತಿದ್ದುಪಡಿ ಮಾಡಿದೆ. ಈಗಾಗಲೇ ಹೈಕೋರ್ಟ್ನಲ್ಲಿ ಇತ್ಯರ್ಥಗೊಂಡಿರುವ ಪ್ರಕರಣಗಳನ್ನು ಮರುಪರಿಶೀಲಿಸುವ ಅಗತ್ಯವಿಲ್ಲ. ಪ್ರಸ್ತುತ ಬಾಕಿ ಇರುವ ಪ್ರಕರಣಗಳನ್ನು ಮಾತ್ರ ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾಯಿಸಲಾಗುವುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



