ಮುಂಬೈ: ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಬಾಲಿವುಡ್ ನಟ ಸೊಹೈಲ್ ಖಾನ್ ಈಗ ಮೊದಲ ಬಾರಿಗೆ ತಮ್ಮ ವೈವಾಹಿಕ ಬದುಕಿನ ಬಗ್ಗೆ ಮೌನ ಮುರಿದಿದ್ದಾರೆ. ಮಾಜಿ ಪತ್ನಿ ಸೀಮಾ ಸಜ್ದೇಹ್ ಎದುರಲ್ಲೇ “ನಮ್ಮ ಸಂಬಂಧ ಮುರಿದಿದ್ದರೆ ಅದರ ಹೊಣೆ ನನ್ನದು” ಎಂದು ಒಪ್ಪಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
‘ಅಲೈಯನ್ಸ್’ ರಿಯಾಲಿಟಿ ಶೋ ಪ್ರೋಮೋದಲ್ಲಿ ಮಾತನಾಡಿದ ಸೊಹೈಲ್, “25 ವರ್ಷಗಳ ಸುಂದರ ಜೀವನವನ್ನು ನಾವು ಒಟ್ಟಿಗೆ ಕಳೆದಿದ್ದೇವೆ. ತಪ್ಪು ನಡೆದಿದ್ದರೆ ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಈ ಹೇಳಿಕೆ ಕೇಳಿ ಸೀಮಾ ಸಂತಸ ವ್ಯಕ್ತಪಡಿಸಿದ್ದು, ವೇದಿಕೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸೊಹೈಲ್ ಅವರ ಪ್ರೌಢ ನಿಲುವಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, “ನಿಜವಾದ ಜವಾಬ್ದಾರಿ ಎಂದರೆ ಇದೇ”, “ಸಂಬಂಧ ಮುರಿದರೂ ಗೌರವ ಉಳಿಸಿಕೊಂಡಿದ್ದಾರೆ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
1998ರಲ್ಲಿ ವಿವಾಹವಾಗಿದ್ದ ಸೊಹೈಲ್ ಮತ್ತು ಸೀಮಾ 2020ರಲ್ಲಿ ವಿಚ್ಛೇದನ ಪಡೆದಿದ್ದರು. ಇಬ್ಬರು ಮಕ್ಕಳ ಪಾಲನೆ-ಪೋಷಣೆಯನ್ನು ಇಂದಿಗೂ ಜಂಟಿಯಾಗಿ ನೋಡಿಕೊಳ್ಳುತ್ತಿದ್ದು, ವಿಚ್ಛೇದನದ ಬಳಿಕವೂ ಪರಸ್ಪರ ಗೌರವದ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.



