20 ಗಂಟೆಗಳ ಕಾಲ ನೀರಿನಡಿಯೇ ಸಾಹಸ ದೃಶ್ಯಗಳಲ್ಲಿ ನಟಿಸಿ, ಯಾವುದೇ ಡೂಪ್ ಬಳಸದೇ ರಶ್ಮಿಕಾ ಮಂದಣ್ಣ ‘ಮೈಸಾ’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾದ ಅಂಡರ್ವಾಟರ್ ಫೈಟ್ ಸೀಕ್ವೆನ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಆಗಿ ಮೂಡಿಬರುತ್ತಿರುವ ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಇದುವರೆಗೆ ಕಾಣಿಸದ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್ಗಳು ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿವೆ.
ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಸಾಮಾನ್ಯವಾಗಿ ಬಾಡಿ ಡಬಲ್ ಬಳಸುವ ಸಂಪ್ರದಾಯವಿದ್ದರೂ, ಈ ಚಿತ್ರದಲ್ಲಿ ರಶ್ಮಿಕಾ ಸ್ವತಃ ಎಲ್ಲಾ ಫೈಟ್ ಸೀನ್ಗಳನ್ನು ನಿರ್ವಹಿಸಿದ್ದಾರೆ. ಎರಡು ದಿನಗಳ ಕಾಲ ನಿರಂತರವಾಗಿ ನೀರಿನಲ್ಲಿ ಉಳಿದು ಸುಮಾರು 20 ಗಂಟೆಗಳ ಅಂಡರ್ವಾಟರ್ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಚಿತ್ರೀಕರಣದ ಅಪರೂಪದ ಚಿತ್ರಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಭಾರತೀಯ ಸಿನಿ ಇತಿಹಾಸದಲ್ಲಿ ಮಹಿಳಾ ಪ್ರಧಾನ ಸಿನಿಮಾಗೆ ಹೊಸ ಮಾನದಂಡವಾಗಲಿದೆ ಎಂದು ಹೇಳಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ.



