ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿರುವ ಪರಿಣಾಮ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಇದರ ಬೆನ್ನಲ್ಲೇ ರಾಜ್ಯದ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಡ್ಯಾಂಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಕೃಷಿ ಹಾಗೂ ಕುಡಿಯುವ ನೀರಿನ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.
ಆಲಮಟ್ಟಿ ಜಲಾಶಯದಲ್ಲಿ ಭಾರಿ ಒಳಹರಿವು:
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಸದ್ಯ ನೀರಿನ ಮಟ್ಟ 514.30 ಮೀಟರ್ ಇದೆ. ಒಳಹರಿವು 1,43,653 ಕ್ಯೂಸೆಕ್ ಇದ್ದರೆ, ಹೊರಹರಿವು 483 ಕ್ಯೂಸೆಕ್ ಇದೆ.
ಕೆಆರ್‌ಎಸ್‌ಗೆ 24 ಗಂಟೆಯಲ್ಲಿ 1 ಟಿಎಂಸಿ ನೀರು:
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯಕ್ಕೂ ಉತ್ತಮ ಒಳಹರಿವು ದಾಖಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 1 ಟಿಎಂಸಿ ನೀರು ಹರಿದು ಬಂದಿದೆ.
ಕೆಆರ್‌ಎಸ್‌ನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಸದ್ಯ ನೀರಿನ ಮಟ್ಟ 87.50 ಅಡಿ ಇದೆ. ಒಳಹರಿವು 12,312 ಕ್ಯೂಸೆಕ್ ಹಾಗೂ ಹೊರಹರಿವು 762 ಕ್ಯೂಸೆಕ್ ಇದೆ. ಜಲಾಶಯದ ಒಟ್ಟು ಸಾಮರ್ಥ್ಯ 49.452 ಟಿಎಂಸಿ ಇದ್ದು, ಪ್ರಸ್ತುತ 14.503 ಟಿಎಂಸಿ ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿ, ಭದ್ರಾ ಜಲಾಶಯಗಳಲ್ಲೂ ಏರಿಕೆ:
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ ಉತ್ತಮ ಒಳಹರಿವು ಮುಂದುವರಿದಿದೆ. ಜಲಾಶಯದ ನೀರಿನ ಮಟ್ಟ 1762.05 ಅಡಿಗೆ ತಲುಪಿದ್ದು, ಒಳಹರಿವು 19,496 ಕ್ಯೂಸೆಕ್ ಇದೆ.
ಭದ್ರಾ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 146.1 ಅಡಿ ಇದ್ದು, ಒಳಹರಿವು 13,123 ಕ್ಯೂಸೆಕ್ ದಾಖಲಾಗಿದೆ.
ಹೇಮಾವತಿ, ಹಾರಂಗಿಗೂ ಹರಿದು ಬರುತ್ತಿದೆ ನೀರು:
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ 11,470 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 2902.07 ಅಡಿ ಇದ್ದು, ಪ್ರಸ್ತುತ 21.062 ಟಿಎಂಸಿ ನೀರು ಸಂಗ್ರಹವಾಗಿದೆ.
ಕೊಡಗಿನ ಹಾರಂಗಿ ಜಲಾಶಯಕ್ಕೂ ಕಾವೇರಿ ನೀರಿನ ಹರಿವು ಉತ್ತಮವಾಗಿದ್ದು, ಒಳಹರಿವು 2,751 ಕ್ಯೂಸೆಕ್ ದಾಖಲಾಗಿದೆ.
ಬಸವಸಾಗರದಲ್ಲಿ ಒಳಹರಿವು ಸ್ಥಗಿತ
ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ಸದ್ಯ ಒಳಹರಿವು ಸ್ಥಗಿತಗೊಂಡಿದೆ. ಜಲಾಶಯದ ನೀರಿನ ಮಟ್ಟ 488.77 ಮೀಟರ್ ಇದ್ದು, ಹೊರಹರಿವು 322 ಕ್ಯೂಸೆಕ್ ಇದೆ.
ಮುಂಗಾರು ಮಳೆ ಮುಂದುವರಿದರೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.



