HomeKarnataka Newsಬೆಳಗಾವಿಯ ಐತಿಹಾಸಿಕ ಯಲ್ಲಮ್ಮ ದೇವಿ ದೇವಸ್ಥಾನವನ್ನು ಸಾರ್ವಜನಿಕ ಟ್ರಸ್ಟ್‌ ಎಂದು ಘೋಷಿಸಿದ ಹೈಕೋರ್ಟ್

ಬೆಳಗಾವಿಯ ಐತಿಹಾಸಿಕ ಯಲ್ಲಮ್ಮ ದೇವಿ ದೇವಸ್ಥಾನವನ್ನು ಸಾರ್ವಜನಿಕ ಟ್ರಸ್ಟ್‌ ಎಂದು ಘೋಷಿಸಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದ ಐತಿಹಾಸಿಕ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನವನ್ನು ಸಾರ್ವಜನಿಕ ಟ್ರಸ್ಟ್ ಎಂದು ಘೋಷಿಸಿರುವ ಕರ್ನಾಟಕ ಹೈಕೋರ್ಟ್, 1950ರ ಬಾಂಬೆ ಪಬ್ಲಿಕ್ ಟ್ರಸ್ಟ್ (ಬಿಪಿಟಿ) ಕಾಯ್ದೆಯಡಿ ದೇವಾಲಯವನ್ನು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲು ಆದೇಶ ನೀಡಿದೆ.

ಜಲಾಲಪುರ ಗ್ರಾಮದ ಮಲ್ಲಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ. ದತ್ತಿ ಆಯುಕ್ತರು ಹಾಗೂ ಬೆಳಗಾವಿ ಜಿಲ್ಲಾ ನ್ಯಾಯಾಲಯ ದೇವಾಲಯವನ್ನು ಸಾರ್ವಜನಿಕ ಟ್ರಸ್ಟ್ ಎಂದು ಪರಿಗಣಿಸಲು ನಿರಾಕರಿಸಿ ನೀಡಿದ್ದ ಆದೇಶಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

ತೀರ್ಪಿನಲ್ಲಿ, ಶ್ರೀ ಯಲ್ಲಮ್ಮ ದೇವಿ ದೇವಸ್ಥಾನವು ಪ್ರಾಚೀನ ಧಾರ್ಮಿಕ ಕ್ಷೇತ್ರವಾಗಿದ್ದು, ಹಿಂದೂ ಸಮುದಾಯದ ಸಾರ್ವಜನಿಕರು ಪೂಜೆ ಸಲ್ಲಿಸಲು ಹಾಗೂ ದೇವರಿಗೆ ಸಮರ್ಪಣೆ ಸಲ್ಲಿಸಲು ಹಕ್ಕಿನ ಆಧಾರದ ಮೇಲೆ ಬಳಸುತ್ತಿರುವ ಸಾರ್ವಜನಿಕ ಆರಾಧನಾ ಸ್ಥಳವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆಯ ಸೆಕ್ಷನ್ 2(17)ರ ಪ್ರಕಾರ ಈ ದೇವಾಲಯವು ‘ದೇವಾಲಯ’ದ ವ್ಯಾಖ್ಯಾನಕ್ಕೆ ಒಳಪಡುವುದರಿಂದ, ಸೆಕ್ಷನ್ 2(13)ರ ಅಡಿಯಲ್ಲಿ ಸಾರ್ವಜನಿಕ ಟ್ರಸ್ಟ್ ಎಂದು ಪರಿಗಣಿಸಲು ಅಗತ್ಯವಾದ ಎಲ್ಲಾ ಕಾನೂನು ಮಾನದಂಡಗಳನ್ನು ಪೂರೈಸಿದೆ ಎಂದು ಪೀಠ ತಿಳಿಸಿದೆ.

ದೇವಾಲಯದಲ್ಲಿ ಕೆಲವು ಕುಟುಂಬಗಳಿಗೆ ಪೂಜೆ ನಡೆಸುವ ಆನುವಂಶಿಕ ಹಕ್ಕುಗಳಿರುವ ಕಾರಣ ಅದು ಖಾಸಗಿ ಆಸ್ತಿ ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ದೇವಾಲಯವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಭಕ್ತರು ಸ್ವತಂತ್ರವಾಗಿ ಪ್ರವೇಶಿಸಿ ಪೂಜೆ ಸಲ್ಲಿಸುವ ಹಕ್ಕು ಹೊಂದಿರುವುದರಿಂದ ಅದನ್ನು ಸಾರ್ವಜನಿಕ ಟ್ರಸ್ಟ್ ಆಗಿಯೇ ನೋಂದಾಯಿಸಬೇಕು ಎಂದು ಆದೇಶಿಸಿದೆ.

ಅಲ್ಲದೆ, ಅರ್ಚಕರು ಅಥವಾ ಪೂಜಾರಿಗಳು ಟ್ರಸ್ಟಿಗಳಾಗಲು ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಭಕ್ತರು ಮತ್ತು ದೇವರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುವ ಅರ್ಚಕರು ದೇವಾಲಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಕಾರಣ ಟ್ರಸ್ಟಿಗಳಾಗಲು ಅರ್ಹರು ಎಂದು ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, 1994ರ ಮೂಲ ಅರ್ಜಿಯಲ್ಲಿ ಉಲ್ಲೇಖಿಸಲಾದ ಟ್ರಸ್ಟಿಗಳ ಜೊತೆಗೆ ಅರ್ಚಕರ ಎರಡು ಕುಟುಂಬಗಳಿಂದ ತಲಾ ಒಬ್ಬರನ್ನು ದೇವಾಲಯದ ಟ್ರಸ್ಟಿಗಳಾಗಿ ಪರಿಗಣಿಸುವಂತೆ ನ್ಯಾಯಾಲಯ ಆದೇಶಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img