HomeKarnataka Newsಲೋಕಾಯುಕ್ತರಿಗೆ ನಿಂದನಾತ್ಮಕ ಪತ್ರ ಬರೆದ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ

ಲೋಕಾಯುಕ್ತರಿಗೆ ನಿಂದನಾತ್ಮಕ ಪತ್ರ ಬರೆದ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ

For Dai;y Updates Join Our whatsapp Group

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಸಂಸ್ಥೆಯ ವಿರುದ್ಧ ಅವಹೇಳನಕಾರಿ ಹಾಗೂ ನಿಂದನಾತ್ಮಕ ಪದಗಳನ್ನು ಬಳಸಿ ಪತ್ರ ಬರೆದ ಪ್ರಕರಣದಲ್ಲಿ ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿದೆ.

ಶಿಕ್ಷೆಗೆ ಗುರಿಯಾದವರು ಬಳ್ಳಾರಿಯ ಹಾವಿನಾಳ ಬಸಣ್ಣ ಕಾಂಪೌಂಡ್ ನಿವಾಸಿ ಎಸ್.ಜಿ. ಶಂಕರ್ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕರಣದ ವಿವರಗಳ ಪ್ರಕಾರ, ಎಸ್.ಜಿ. ಶಂಕರ್ ಅವರು 2015ರಲ್ಲಿ ಬಳ್ಳಾರಿ ಮುಜರಾಯಿ ಇಲಾಖೆಯ ಜಂಟಿ ಆಯುಕ್ತರ ವಿರುದ್ಧ ಅಧಿಕಾರ ದುರುಪಯೋಗ ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೇವಸ್ಥಾನದ ಸಮೀಪದ ಅಂಗಡಿಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಆದರೆ, ಲೋಕಾಯುಕ್ತ ನಡೆಸಿದ ತನಿಖೆಯಲ್ಲಿ ಜಂಟಿ ಆಯುಕ್ತರು ಕಾನೂನುಬದ್ಧವಾಗಿಯೇ ಅಂಗಡಿಗಳನ್ನು ತೆರವುಗೊಳಿಸಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಪ್ರಕರಣವನ್ನು ಮುಕ್ತಾಯಗೊಳಿಸಿ, ಅದರ ಮಾಹಿತಿ ನೀಡುವ ಪತ್ರವನ್ನು ದೂರುದಾರರಿಗೆ ಕಳುಹಿಸಿದ್ದರು.

ಪ್ರಕರಣ ಮುಕ್ತಾಯಗೊಂಡಿದ್ದರಿಂದ ಅಸಮಾಧಾನಗೊಂಡ ಶಂಕರ್, 2022ರಲ್ಲಿ ಉಪಲೋಕಾಯುಕ್ತರಿಗೆ ಹಾಗೂ 2023ರಲ್ಲಿ ಲೋಕಾಯುಕ್ತರಿಗೆ ಅವಹೇಳನಕಾರಿ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿ ಪತ್ರಗಳನ್ನು ಬರೆದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಸಂಸ್ಥೆ, ಅವರ ವಿರುದ್ಧ ಕಾನೂನು ಕ್ರಮ ಏಕೆ ಕೈಗೊಳ್ಳಬಾರದು ಎಂದು ನೋಟಿಸ್ ಜಾರಿ ಮಾಡಿತ್ತು. ಆದರೆ, ನೋಟಿಸ್‌ಗೆ ಉತ್ತರಿಸುವ ಬದಲಿಗೆ ಮತ್ತೊಮ್ಮೆ ನಿಂದನಾತ್ಮಕ ಭಾಷೆಯಲ್ಲೇ ಪತ್ರ ಬರೆದು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ, ಎಸ್.ಜಿ. ಶಂಕರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಆರು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img