HomeIndia Newsರಾಮನ ಕಾಣಿಕೆಗೂ ಕನ್ನ ಹಾಕಿದ್ರಾ? ಅಯೋಧ್ಯೆ ದೇಣಿಗೆ ದೋಚಿದ ಜಾಲ ಬಯಲು!

ರಾಮನ ಕಾಣಿಕೆಗೂ ಕನ್ನ ಹಾಕಿದ್ರಾ? ಅಯೋಧ್ಯೆ ದೇಣಿಗೆ ದೋಚಿದ ಜಾಲ ಬಯಲು!

For Dai;y Updates Join Our whatsapp Group

ಅಯೋಧ್ಯೆ: ಅಯೋಧ್ಯೆಯ ಭವ್ಯ ರಾಮ ಮಂದಿರಕ್ಕೆ ಭಕ್ತರು ಅರ್ಪಿಸಿದ್ದ ದೇಣಿಗೆ ಹಣವನ್ನು ಲೂಟಿ ಮಾಡುತ್ತಿದ್ದ ಜಾಲದ ಬಗ್ಗೆ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಎಸ್‌ಐಟಿ ತನಿಖೆಯ ಪ್ರಕಾರ, ಇದು ಸಾಮಾನ್ಯ ಕಳ್ಳತನವಲ್ಲ. ದೇಣಿಗೆ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲ ನೌಕರರು ವ್ಯವಸ್ಥಿತವಾಗಿ ಸಂಚು ರೂಪಿಸಿ ಹಣ ದೋಚಿರುವುದು ಬೆಳಕಿಗೆ ಬಂದಿದೆ. ಕೇವಲ 40 ದಿನಗಳ ಅವಧಿಯಲ್ಲಿ ಸುಮಾರು 70 ಬಾರಿ ದೇಣಿಗೆ ಹಣಕ್ಕೆ ಕನ್ನ ಹಾಕಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ತನಿಖೆಯ ಪ್ರಕಾರ, ಆರೋಪಿಗಳು ಪ್ರತಿದಿನ ಬೆಳಗ್ಗೆಯೇ ಫೋನ್ ಮೂಲಕ ಚರ್ಚಿಸಿ ತಮ್ಮ ಪಾತ್ರಗಳನ್ನು ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಸಿಸಿಟಿವಿ ಕ್ಯಾಮೆರಾಗಳಿಗೆ ಸೆರೆಯಾಗದಂತೆ ಕೆಲವರು ಕ್ಯಾಮೆರಾ ಮುಂದೆ ನಿಂತು ಅಡ್ಡಿಪಡಿಸುತ್ತಿದ್ದರು. ಇನ್ನು ಕೆಲವರು ನೋಟುಗಳನ್ನು ಬಟ್ಟೆಯೊಳಗೆ ಅಡಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಮಂದಿರದ ಭದ್ರತಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೇಣಿಗೆ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ್ ಶುಕ್ಲಾ ಮತ್ತು ಮನೀಶ್ ಎಂಬ ಸಿಬ್ಬಂದಿ ಹಣ ಎಣಿಸುವ ನೆಪದಲ್ಲಿ ನೋಟುಗಳನ್ನು ತಮ್ಮ ಬಟ್ಟೆಯೊಳಗೆ ಅಡಗಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇವರಿಗೆ ಅನುಕಲ್ಪ್, ಕರುಣೇಶ್ ಮತ್ತು ಲವ್ಕುಶ್ ಎಂಬ ಸಿಬ್ಬಂದಿ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.

ಮುಖ್ಯ ಆರೋಪಿ ಎನ್ನಲಾಗಿರುವ ಅವಿನಾಶ್ ಶುಕ್ಲಾ ಹಣ ಲೂಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಲೂಟಿ ಮಾಡಿದ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಆದರೆ ಹೆಚ್ಚು ಅಪಾಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿ ಅವಿನಾಶ್ ಹೆಚ್ಚಿನ ಪಾಲು ಪಡೆಯುತ್ತಿದ್ದ ಎನ್ನಲಾಗಿದೆ.

ತನಿಖೆ ವೇಳೆ ಮತ್ತೊಂದು ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ. ಕಳ್ಳತನ ನಡೆದ ಕೆಲವು ದಿನಗಳ ಸಿಸಿಟಿವಿ ದೃಶ್ಯಾವಳಿಗಳು ಅಳಿಸಲಾಗಿರುವುದು ಪತ್ತೆಯಾಗಿದೆ.

ಇದರಿಂದ ಆರೋಪಿಗಳಿಗೆ ಸಿಸಿಟಿವಿ ವ್ಯವಸ್ಥೆಯ ಮೇಲೆ ಪ್ರಭಾವ ಇತ್ತೇ ಅಥವಾ ಒಳಗಿನಿಂದಲೇ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭಾಷ್ ಶ್ರೀವಾಸ್ತವ ಮತ್ತು ಹೈಪ್ರೊಫೈಲ್ ಪಾಸ್ ಹಗರಣದ ಪ್ರಮುಖ ಆರೋಪಿ ಎನ್ನಲಾಗಿರುವ ತಿನ್ನು ಯಾದವ್ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಘಟನೆ ಬಳಿಕ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಣಿಗೆ ಸ್ವೀಕಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.

ಮುಂದಿನ ದಿನಗಳಲ್ಲಿ ನಗದು ಕಾಣಿಕೆ ಕಡಿಮೆ ಮಾಡಿ, ಭಕ್ತರಿಗೆ ಕ್ಯೂಆರ್ ಕೋಡ್ ಮತ್ತು ಡಿಜಿಟಲ್ ಕಿಯೋಸ್ಕ್ ಮೂಲಕ ಕಾಣಿಕೆ ಸಲ್ಲಿಸುವ ವ್ಯವಸ್ಥೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಅಲ್ಲದೆ, ಖಾಸಗಿ ಹೊರಗುತ್ತಿಗೆ ಸಿಬ್ಬಂದಿಯ ಬದಲು ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್‌ಗಳ ಕಾಯಂ ಸಿಬ್ಬಂದಿಯನ್ನು ಹಣ ನಿರ್ವಹಣೆ ಮತ್ತು ಎಣಿಕೆ ಕಾರ್ಯಕ್ಕೆ ಬಳಸುವ ಕುರಿತು ಚರ್ಚೆ ನಡೆಯುತ್ತಿದೆ.

ರಾಮ ಮಂದಿರ ದೇಣಿಗೆ ಹಗರಣದ ತನಿಖೆ ಸದ್ಯ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img