ಶಿವಮೊಗ್ಗ: ಮಳೆ ಕೊರತೆಯಿಂದ ಸ್ಥಗಿತಗೊಂಡಿದ್ದ ಸಾಗರ ತಾಲೂಕಿನ ಮುಪ್ಪಾನೆ–ಹಲ್ಕೆ ಲಾಂಚ್ ಸೇವೆ ಮತ್ತೆ ಆರಂಭವಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇಂದಿನಿಂದ ಸೇವೆ ಪುನರಾರಂಭಿಸಿದೆ.
ಜೂನ್ ಆರಂಭದಲ್ಲಿ ಜಲಾಶಯದ ನೀರಿನ ಮಟ್ಟ ತೀವ್ರವಾಗಿ ಕುಸಿದ ಕಾರಣ ನೀರಿನೊಳಗಿದ್ದ ಮರದ ಕಾಂಡಗಳು ಮೇಲ್ಮೈಗೆ ಕಾಣಿಸಿಕೊಂಡಿದ್ದವು. ಲಾಂಚ್‌ನ ತಳಭಾಗಕ್ಕೆ ಅಡ್ಡಿಯಾಗುವ ಹಾಗೂ ವಾಹನಗಳನ್ನು ಏರಿಳಿಸುವ ಸ್ಥಳದಲ್ಲಿ ಸುರಕ್ಷತಾ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಜೂನ್ 2ರಂದು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಪ್ರಸ್ತುತ ಹಿನ್ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಸುರಕ್ಷಿತ ಸಂಚಾರಕ್ಕೆ ಅವಕಾಶ ದೊರೆತಿದ್ದು, ಲಾಂಚ್ ಸೇವೆಯನ್ನು ಪುನಃ ಆರಂಭಿಸಲಾಗಿದೆ.
ಕರೂರು ಹಾಗೂ ಭಾರಂಗಿ ಹೋಬಳಿಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ಲಾಂಚ್ ಸೇವೆ ತುಮರಿ, ಸಿಗಂದೂರು ಮತ್ತು ಭಾರಂಗಿ ಭಾಗದ ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಮಹತ್ವದ ಅನುಕೂಲ ಕಲ್ಪಿಸುತ್ತಿದ್ದು, ಸೇವೆ ಪುನಾರಂಭಗೊಂಡಿರುವುದು ಸ್ಥಳೀಯರಲ್ಲಿ ಸಂತಸಕ್ಕೆ ಕಾರಣವಾಗಿದೆ.



