ಬದಲಾಗುತ್ತಿರುವ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳಿಂದ ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಅಪಾಯ ಹೆಚ್ಚುತ್ತಿದೆ.
ಆದರೆ ಹೃದಯಾಘಾತದ ಆರಂಭಿಕ ಲಕ್ಷಣಗಳನ್ನು ಹಲವರು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸುತ್ತಿರುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಹೃದಯಾಘಾತ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯ ನಡುವೆ ವ್ಯತ್ಯಾಸವಿದ್ದು, ಲಕ್ಷಣಗಳನ್ನು ಸರಿಯಾಗಿ ಗುರುತಿಸುವುದು ಅಗತ್ಯವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿ ಆಹಾರ ಸೇವನೆಗೆ ಸಂಬಂಧಿಸಿದ್ದಾಗಿರುತ್ತದೆ. ಊಟದ ಬಳಿಕ ಅಥವಾ ದೀರ್ಘಕಾಲ ಆಹಾರ ಸೇವಿಸದಿದ್ದಾಗ ಹೊಟ್ಟೆ ಉಬ್ಬರ, ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.
ಆದರೆ ಹೃದಯಾಘಾತದ ಸಂದರ್ಭದಲ್ಲಿ ಎದೆ ನೋವು ಅಥವಾ ಅಸ್ವಸ್ಥತೆಯ ಜೊತೆಗೆ ತೀವ್ರ ಆಯಾಸ, ಅತಿಯಾದ ಬೆವರು, ಹೃದಯ ಬಡಿತ ಹೆಚ್ಚಳ, ವಾಂತಿ, ಕೈಗಳಲ್ಲಿ ನೋವು ಅಥವಾ ಸೆಳೆತದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಇನ್ನು ನಿದ್ರೆಯಲ್ಲಿ ಹಠಾತ್ತನೆ ಎಚ್ಚರಗೊಳ್ಳುವುದು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದನ್ನು ನಿರ್ಲಕ್ಷಿಸಬಾರದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವ ಸಮಸ್ಯೆ ಅಥವಾ ನಿದ್ರೆಯ ಸಮಯದ ಉಸಿರಾಟದ ತೊಂದರೆಯಂತಹ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.
ಶೌಚಾಲಯದಲ್ಲಿ ಮಲವಿಸರ್ಜನೆ ಮಾಡುವಾಗ ಅತಿಯಾಗಿ ಒತ್ತಡ ಹಾಕುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಮಲಬದ್ಧತೆ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಮಲಬದ್ಧತೆ ತಡೆಯಲು ಹೆಚ್ಚಿನ ನಾರಿನಾಂಶ ಇರುವ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಹಾಗೂ ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮವಾಗಿದೆ.
ಹೃದಯಾಘಾತದ ಯಾವುದೇ ಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ವೈದ್ಯರು ತಿಳಿಸಿದ್ದಾರೆ.



