ಸಿಡ್ನಿ: ‘ಜುರಾಸಿಕ್ ಪಾರ್ಕ್’ ಸರಣಿಯ ಡಾ. ಅಲನ್ ಗ್ರಾಂಟ್ ಪಾತ್ರದ ಮೂಲಕ ಕೋಟ್ಯಂತರ ಸಿನಿಪ್ರಿಯರ ಮನ ಗೆದ್ದಿದ್ದ ನ್ಯೂಜಿಲೆಂಡ್ ನಟ ಸ್ಯಾಮ್ ನೀಲ್ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಿಡ್ನಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಅವರು ಕೊನೆಯುಸಿರೆಳೆದಿದ್ದು, ಅಧಿಕೃತ ಇನ್ಸ್ಟಾಗ್ರಾಮ್ ಪ್ರಕಟಣೆಯ ಮೂಲಕ ಕುಟುಂಬ ಈ ಸುದ್ದಿಯನ್ನು ಖಚಿತಪಡಿಸಿದೆ.
ಕುಟುಂಬದ ಹೇಳಿಕೆಯ ಪ್ರಕಾರ, ಸ್ಯಾಮ್ ನೀಲ್ ಅವರ ಸಾವು ಹಠಾತ್ ಹಾಗೂ ಅನಿರೀಕ್ಷಿತವಾಗಿತ್ತು. ಆದರೆ ಅವರು ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖರಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ ಸೇಂಟ್ ವಿನ್ಸೆಂಟ್ಸ್ ಪ್ರೈವೇಟ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಕುಟುಂಬ ಕೃತಜ್ಞತೆ ಸಲ್ಲಿಸಿದ್ದು, ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಮನವಿ ಮಾಡಿದೆ.
ಅಪರೂಪದ ರಕ್ತದ ಕ್ಯಾನ್ಸರ್ ವಿರುದ್ಧ ಹಲವು ವರ್ಷ ಹೋರಾಡಿದ್ದ ಸ್ಯಾಮ್ ನೀಲ್, ಇಮ್ಯುನೊಥೆರಪಿ ಸೇರಿದಂತೆ ವಿಶೇಷ ಚಿಕಿತ್ಸೆಯ ಬಳಿಕ ಈ ವರ್ಷ ಕ್ಯಾನ್ಸರ್ ಮುಕ್ತರಾಗಿರುವುದಾಗಿ ತಿಳಿಸಿದ್ದರು. ಆದರೆ ಆರೋಗ್ಯ ಸುಧಾರಿಸಿದ್ದ ಕೆಲವೇ ತಿಂಗಳಲ್ಲಿ ಅವರು ನಿಧನರಾಗಿರುವುದು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.
ಐದು ದಶಕಗಳಿಗೂ ಅಧಿಕ ಕಾಲದ ಸಿನಿ ಪಯಣದಲ್ಲಿ ‘ಜುರಾಸಿಕ್ ಪಾರ್ಕ್’, ‘ದಿ ಪಿಯಾನೋ’, ‘ದಿ ಹಂಟ್ ಫಾರ್ ರೆಡ್ ಅಕ್ಟೋಬರ್’, ‘ಪೊಸೆಷನ್’, ‘ಪೀಕಿ ಬ್ಲೈಂಡರ್ಸ್’ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಗೌರವ ಗಳಿಸಿದ್ದರು.



