ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಿಲ್ಲೆಯಾದ್ಯಂತ ಮಳೆಯಿಲ್ಲದೆ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರಧನ ಬಿಡುಗಡೆ ಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಕರಮಡಿ ಹಾಗೂ ಜಿಲ್ಲಾ ಗೌರವಾಧ್ಯಕ್ಷ ಟಾಕಪ್ಪ ಸಾತಪೂತೆ ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ ಬಳಿಕ ಒಂದೂವರೆ ತಿಂಗಳಿನಿಂದ ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಒಣಗಿ ನಿಂತಿದ್ದು, ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಹೆಸರು, ಗೋವಿನ ಜೋಳ, ಶೇಂಗಾ, ಈರುಳ್ಳಿ, ಜೋಳ, ಎಳ್ಳು ಹಾಗೂ ಉದ್ದು ಸೇರಿದಂತೆ ಪ್ರಮುಖ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಆದ್ದರಿಂದ ತಕ್ಷಣ ಬರ ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಬೆಳೆಗೂ ಪರಿಹಾರ ಘೋಷಿಸಬೇಕು. ಕೆಲವೇ ಬೆಳೆಗಳಿಗೆ ಪರಿಹಾರ ನೀಡುವುದರಿಂದ ರೈತರ ಸಂಕಷ್ಟ ನಿವಾರಣೆಯಾಗುವುದಿಲ್ಲ ಎಂದು ಹೇಳಿದರು.
ಬೆಳೆ ಸಮೀಕ್ಷೆ ನಡೆಸುತ್ತಿರುವ ಪಿಆರ್ಒಗಳು ಸಮರ್ಪಕವಾಗಿ ಹೊಲಗಳಿಗೆ ಭೇಟಿ ನೀಡದೆ ಮನಬಂದಂತೆ ಮಾಹಿತಿ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಹಶೀಲ್ದಾರರು ಈ ಕುರಿತು ನಿಗಾ ವಹಿಸಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷದ ಬೆಳೆ ವಿಮೆ ಹಣ ಹಾಗೂ ಮೆಣಸಿನಕಾಯಿ ಬೆಳೆ ಮಧ್ಯಂತರ ಪರಿಹಾರ ಇನ್ನೂ ರೈತರಿಗೆ ದೊರೆತಿಲ್ಲ. ಬ್ಯಾಂಕುಗಳು ಸಾಲ ಮರುಪಾವತಿಗೆ ರೈತರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಒನ್ ಟೈಮ್ ಸೆಟ್ಲ್ಮೆಂಟ್ (ಒಟಿಎಸ್) ಮಾಡಿಕೊಂಡ ರೈತರಿಗೆ ಅದೇ ಬ್ಯಾಂಕುಗಳಲ್ಲಿ ಮತ್ತೆ ಸಾಲ ಸೌಲಭ್ಯ ಕಲ್ಪಿಸಬೇಕು. ಜೊತೆಗೆ ರೈತರ ಜಮೀನುಗಳಿಗೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ವರ್ಷದ ಬೆಳೆ ಹಾನಿಯನ್ನು ಪರಿಗಣಿಸಿ ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿದರು.
ಬಳಿಕ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಧನಂಜಯ ಎಂ. ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹಿರೇಮಠ, ಶಿರಹಟ್ಟಿ ತಾಲೂಕು ಅಧ್ಯಕ್ಷ ವೀರನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಜಿಲ್ಲೆಯಲ್ಲಿ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿವೆ. ಸರ್ಕಾರ ತಕ್ಷಣ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು.”
– ಯಲ್ಲಪ್ಪ ಕರಮಡಿ, ಜಿಲ್ಲಾಧ್ಯಕ್ಷ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ



