ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸೂರ್ಯ ವಿಷನ್ ಬೆಂಗಳೂರು ನಿರ್ಮಾಣದ ‘ದೇವಿ’ ಕನ್ನಡ ಚಲನಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಮಕ್ಕಳ ಕನಸುಗಳು, ಪೋಷಕರ ಮಹತ್ವಾಕಾಂಕ್ಷೆ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಸೂಕ್ಷ್ಮ ವಿಷಯಗಳನ್ನು ತೆರೆ ಮೇಲೆ ಕಟ್ಟಿಕೊಡಲಿದೆ.
ಬಡತನದಲ್ಲಿ ಬದುಕುತ್ತಿರುವ ತಾಯಿ ರೇಣುಕಾ ತನ್ನ ಮಗಳು ಗೌರಿ ಚಿತ್ರರಂಗದಲ್ಲಿ ದೊಡ್ಡ ನಾಯಕಿಯಾಗಿ ಹೆಸರು, ಹಣ ಮತ್ತು ಗೌರವ ಗಳಿಸಬೇಕು ಎಂಬ ಕನಸು ಕಾಣುತ್ತಾಳೆ. ಆದರೆ ಗೌರಿ ವೈದ್ಯೆಯಾಗಿ ಸಮಾಜಸೇವೆ ಮಾಡುವ ಕನಸು ಹೊಂದಿರುತ್ತಾಳೆ. ಮಗಳ ಇಚ್ಛೆ ಮತ್ತು ತಾಯಿಯ ಮಹತ್ವಾಕಾಂಕ್ಷೆಯ ನಡುವಿನ ಸಂಘರ್ಷ, ಸ್ಲಿಮ್ ಆಗುವ ಒತ್ತಡ, ಹಾರ್ಮೋನುಗಳ ಬದಲಾವಣೆ, ಮಾನಸಿಕ ತಲ್ಲಣ ಹಾಗೂ ಅದರ ಪರಿಣಾಮಗಳು ಕಥೆಗೆ ತಿರುವು ನೀಡುತ್ತವೆ.
ಪೋಷಕರ ಅತಿಯಾದ ನಿರೀಕ್ಷೆ, ಅಂಧಭಕ್ತಿ, ಬಡತನ ಮತ್ತು ಬಾಲ್ಯದ ಹಕ್ಕುಗಳ ನಡುವಿನ ಸಂಘರ್ಷವನ್ನು ಚಿತ್ರ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದು, “ಮಕ್ಕಳ ಕನಸುಗಳನ್ನು ಹಾಳು ಮಾಡಬಾರದು; ಮಾಡಿದರೆ ಅದರ ಪರಿಣಾಮ ಭೀಕರವಾಗಬಹುದು” ಎಂಬ ಸಂದೇಶವನ್ನು ಸಾರುತ್ತದೆ.
ಚಿತ್ರದಲ್ಲಿ ಛಾಯಾರಾಣಿ, ಧನಲಕ್ಷ್ಮಿ, ರಂಗನಾಥ ನಂಜನಗೂಡು, ಮಣಿಕಂಠ ಸೂರ್ಯ, ಸುಕುಮಾರ, ಪ್ರೀತಿ ಎಸ್. ಬಾಬು, ಕಾವೇರಿ ಶ್ರೀಧರ್, ವೀರೇಂದ್ರ ಬೆಳ್ಳಿಚುಕ್ಕಿ ಹಾಗೂ ಕಾಳಿಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿನಾಯಕ ರೇವಡಿ ಅವರ ಛಾಯಾಗ್ರಹಣ, ಶಿವಸತ್ಯ ಸಂಗೀತ, ಕೃಷ್ಣಪ್ರಸಾದ ಹಳೇಬೀಡು ಸಂಭಾಷಣೆ, ಪೂರ್ಣೇಶ ಸಾಗರ ಚಿತ್ರಕಥೆ, ವೀರೇಂದ್ರ ಬೆಳ್ಳಿಚುಕ್ಕಿ ವಸ್ತ್ರ ವಿನ್ಯಾಸ, ಮುತ್ತುರಾಜ ಟಿ. ಸಂಕಲನ, ಸಚಿನ್ ಕಲರ್ ಗ್ರೇಡಿಂಗ್ ನಿರ್ವಹಿಸಿದ್ದಾರೆ. ಕಾಳಿಪ್ರಸಾದ್ ಕಥೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದು, ಮಾರುತಿ ಎಂ. ಸಹ ನಿರ್ಮಾಪಕರಾಗಿ, ವೀಣಾ ಎಂ. ನಿರ್ಮಾಪಕರಾಗಿ ಚಿತ್ರವನ್ನು ನಿರ್ಮಿಸಿದ್ದಾರೆ.
ಕುಟುಂಬ ಸಮೇತ ವೀಕ್ಷಿಸಬಹುದಾದ ಈ ಚಿತ್ರ ಮಕ್ಕಳ ಭಾವನೆ, ಬಾಲ್ಯದ ಸ್ವಾಯತ್ತತೆ ಹಾಗೂ ಪೋಷಕರ ಜವಾಬ್ದಾರಿಯ ಕುರಿತು ಸಮಾಜದಲ್ಲಿ ಚಿಂತನೆ ಮೂಡಿಸುವ ಪ್ರಯತ್ನ ಮಾಡಿದೆ.



