ಮುಂಬೈ: ಗೌರಿ ಸ್ಪ್ರ್ಯಾಟ್ ಅವರನ್ನು ಮೂರನೇ ಬಾರಿ ವಿವಾಹವಾದ ನಟ ಆಮಿರ್ ಖಾನ್ ವಿರುದ್ಧ ಹೊಸ ವಿವಾದ ಎದ್ದಿದ್ದು, ಮುಖ್ಯ ಮುಫ್ತಿ ಅವರ ಫತ್ವಾ ಸಂಬಂಧಿತ ಹೇಳಿಕೆ ವೈರಲ್ ಆಗಿದೆ. ಇದರ ಜೊತೆಗೆ ಕೆಲವು ಸಂಘಟನೆಗಳು ‘ಲವ್ ಜಿಹಾದ್’ ಆರೋಪ ಮಾಡಿ ಪ್ರತಿಭಟನೆ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಮುಖ್ಯ ಮುಫ್ತಿ, ಮುಸ್ಲಿಂ ಪುರುಷರ ವಿವಾಹ ಕುರಿತ ಧಾರ್ಮಿಕ ನಿಯಮಗಳನ್ನು ಉಲ್ಲೇಖಿಸಿ ಆಮಿರ್ ಖಾನ್ ಅವರ ಮೂರನೇ ವಿವಾಹದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫತ್ವಾ ಹೊರಡಿಸಲಾಗುತ್ತಿದೆ ಎಂದು ಅವರು ಹೇಳಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ಬಿಹಾರದ ಫೋರ್ಬ್ಸ್ಗಂಜ್ನಲ್ಲಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಮಿರ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಅವರ ಪ್ರತಿಕೃತಿಯನ್ನು ದಹನ ಮಾಡಿದ್ದಾರೆ. ನಟ ಪದೇ ಪದೇ ಹಿಂದೂ ಮಹಿಳೆಯರನ್ನು ವಿವಾಹವಾಗುತ್ತಿರುವುದಾಗಿ ಆರೋಪಿಸಿ ‘ಲವ್ ಜಿಹಾದ್’ ವಿಷಯವನ್ನೂ ಪ್ರತಿಭಟನೆಯಲ್ಲಿ ಪ್ರಸ್ತಾಪಿಸಲಾಗಿದೆ.
ಆಮಿರ್ ಖಾನ್ ಅವರ ವೈಯಕ್ತಿಕ ಜೀವನದಲ್ಲಿ ಇದು ಮೂರನೇ ವಿವಾಹವಾಗಿದೆ. ಅವರು ಈ ಹಿಂದೆ ರೀನಾ ದತ್ತಾ ಹಾಗೂ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದು, ಬಳಿಕ ಇಬ್ಬರಿಂದಲೂ ವಿಚ್ಛೇದನ ಪಡೆದಿದ್ದರು. ಇತ್ತೀಚೆಗೆ ಗೌರಿ ಸ್ಪ್ರ್ಯಾಟ್ ಅವರನ್ನು ಮುಂಬೈನ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.



