ಬರ್ಮಿಂಗ್‌ಹ್ಯಾಮ್: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ನಡುವಿನ ಸಂಬಂಧದ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿವೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಇಬ್ಬರೂ ಪರಸ್ಪರ ಮಾತುಕತೆ ನಡೆಸದಿರುವುದು ಈ ಊಹಾಪೋಹಗಳಿಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಅಭ್ಯಾಸದ ಅವಧಿಯಲ್ಲಿ ಗೌತಮ್ ಗಂಭೀರ್ ತಂಡದ ನಾಯಕ ಶುಭ್‌ಮನ್ ಗಿಲ್, ರೋಹಿತ್ ಶರ್ಮಾ ಸೇರಿದಂತೆ ಇತರ ಆಟಗಾರರೊಂದಿಗೆ ಸಾಕಷ್ಟು ಸಮಯ ಚರ್ಚೆ ನಡೆಸಿದರು. ಆದರೆ, ಅದೇ ವೇಳೆ ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಅವರೊಂದಿಗೆ ಯಾವುದೇ ಮಾತುಕತೆ ನಡೆದಿರುವುದು ಕಂಡುಬಂದಿಲ್ಲ ಎಂದು ವರದಿಯಾಗಿದೆ.
ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಸೆಷನ್ ಅನ್ನು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದರು. ಈ ಹಿಂದೆ ಕೂಡ ಗಂಭೀರ್ ಮತ್ತು ಕೊಹ್ಲಿ ನಡುವಿನ ಸಂವಹನದ ಬಗ್ಗೆ ಹಲವು ವರದಿಗಳು ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ, ಈ ಬೆಳವಣಿಗೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಹಿರಿಯ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ರೋಹಿತ್ ಶರ್ಮಾ 21 ಎಸೆತಗಳಲ್ಲಿ 11 ರನ್ ಗಳಿಸಿ ಸ್ಯಾಮ್ ಕರನ್‌ಗೆ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್ ನೀಡಿದರು.
2026ರ ಐಪಿಎಲ್ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ವಿರಾಟ್ ಕೊಹ್ಲಿ, ಆಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಬಳಿಕ ಅವರು ತಂಡಕ್ಕೆ ಮರಳಿದ್ದು, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೋಲು ಕಂಡಿದ್ದ ಭಾರತ ತಂಡಕ್ಕೆ ಹಿರಿಯ ಆಟಗಾರರ ಅನುಭವ ಮಹತ್ವದ್ದಾಗಿದೆ.
ಈ ನಡುವೆ, 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುಂದುವರಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ನಾಯಕ ಶುಭ್‌ಮನ್ ಗಿಲ್ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ವಿಶ್ವಕಪ್‌ಗೆ ಸಂಬಂಧಿಸಿದಂತೆ ತಂಡದ ಸಂಯೋಜನೆ, ಯುವ ಬೌಲರ್‌ಗಳು, ಆಲ್‌ರೌಂಡರ್‌ಗಳು ಹಾಗೂ ಸ್ಪಿನ್ನರ್‌ಗಳ ಆಯ್ಕೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದರು. ಅಲ್ಲದೆ, ಹಿರಿಯ ಆಟಗಾರರ ಅನುಭವ ತಂಡಕ್ಕೆ ಇನ್ನೂ ಮಹತ್ವದ್ದಾಗಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು.



