HomeSports Newsವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರು ಕ್ರಿಕೆಟ್ʼಗೆ ಅಗತ್ಯ: 40 ಓವರ್ʼಗಳ ಏಕದಿನ ಕ್ರಿಕೆಟ್ʼಗೆ ...

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರು ಕ್ರಿಕೆಟ್ʼಗೆ ಅಗತ್ಯ: 40 ಓವರ್ʼಗಳ ಏಕದಿನ ಕ್ರಿಕೆಟ್ʼಗೆ ಗಿಲ್ ವಿರೋಧ

For Dai;y Updates Join Our whatsapp Group

ಬರ್ಮಿಂಗ್‌ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಮಂಗಳವಾರದಿಂದ ಆರಂಭವಾಗಲಿದ್ದು, ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಭವಿಷ್ಯದ ತಂಡದ ಯೋಜನೆ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ನಿವೃತ್ತಿಯ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿರುವ ಗಿಲ್, 2027ರ ಐಸಿಸಿ ಏಕದಿನ ವಿಶ್ವಕಪ್ ಯೋಜನೆಯಲ್ಲಿ ಈ ಇಬ್ಬರು ದಿಗ್ಗಜರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರೊಂದಿಗೆ 2027ರ ವಿಶ್ವಕಪ್‌ಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿರುವುದಾಗಿ ತಿಳಿಸಿದರು. ದಕ್ಷಿಣ ಆಫ್ರಿಕಾದ ಪರಿಸ್ಥಿತಿಗೆ ತಕ್ಕಂತೆ ತಂಡವನ್ನು ಹೇಗೆ ರೂಪಿಸಬೇಕು, ಭವಿಷ್ಯದಲ್ಲಿ ತಂಡಕ್ಕೆ ನೆರವಾಗಬಲ್ಲ ಯುವ ವೇಗಿಗಳು, ಸ್ಪಿನ್ನರ್‌ಗಳು ಹಾಗೂ ಆಲ್‌ರೌಂಡರ್‌ಗಳ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಭವವೇ ತಂಡದ ದೊಡ್ಡ ಶಕ್ತಿಯಾಗಿದೆ ಎಂದು ಗಿಲ್ ಅಭಿಪ್ರಾಯಪಟ್ಟರು. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಬ್ಯಾಟಿಂಗ್ ವಿಭಾಗದ ಬೆನ್ನೆಲುಬಾಗಿ ನಿಂತಿರುವ ಈ ಇಬ್ಬರು ಹಲವು ಮಹತ್ವದ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅವರ ಅನುಭವ ಮತ್ತು ಮಾರ್ಗದರ್ಶನ ಯುವ ಆಟಗಾರರ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಏಕದಿನ ಕ್ರಿಕೆಟ್ ಅನ್ನು 50 ಓವರ್‌ಗಳಿಂದ 40 ಓವರ್‌ಗಳಿಗೆ ಇಳಿಸುವ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಗಿಲ್, ಆ ಪ್ರಸ್ತಾವನೆಗೆ ತಾವು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಏಕದಿನ ಕ್ರಿಕೆಟ್‌ಗೆ ಮತ್ತಷ್ಟು ಜನಪ್ರಿಯತೆ ತರುವ ಉದ್ದೇಶದಿಂದ ಮೂರು ಅಥವಾ ನಾಲ್ಕು ದೇಶಗಳು ಭಾಗವಹಿಸುವ ತ್ರಿಕೋನ ಅಥವಾ ಬಹು ರಾಷ್ಟ್ರಗಳ ಸರಣಿಗಳನ್ನು ಹೆಚ್ಚಾಗಿ ಆಯೋಜಿಸಿದರೆ ಈ ಮಾದರಿಯ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಲಿದೆ ಎಂದು ಸಲಹೆ ನೀಡಿದರು.

ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಭಾರತ ಅನುಭವಿಸಿದ ಟಿ20 ಸರಣಿ ಸೋಲಿನ ಕುರಿತು ಮಾತನಾಡಿದ ಗಿಲ್, ಟಿ20 ಮತ್ತು ಏಕದಿನ ಕ್ರಿಕೆಟ್ ಸಂಪೂರ್ಣ ವಿಭಿನ್ನ ಮಾದರಿಗಳಾಗಿದ್ದು, ಆ ಫಲಿತಾಂಶಗಳು ಏಕದಿನ ತಂಡದ ಆತ್ಮವಿಶ್ವಾಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ನೀಡಿದ್ದು, ಹೊಸ ಸರಣಿಯನ್ನು ಸಕಾರಾತ್ಮಕ ಮನೋಭಾವದೊಂದಿಗೆ ಆರಂಭಿಸಲು ಭಾರತ ಸಜ್ಜಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img