HomeIndia Newsಹೈಕೋರ್ಟ್ ಆದೇಶದಂತೆ ಜೈಲಿನಲ್ಲೇ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಕೌನ್ಸಿಲರ್: ದಕ್ಷಿಣ ಭಾರತದಲ್ಲೇ ಇದೇ ಮೊದಲು

ಹೈಕೋರ್ಟ್ ಆದೇಶದಂತೆ ಜೈಲಿನಲ್ಲೇ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಕೌನ್ಸಿಲರ್: ದಕ್ಷಿಣ ಭಾರತದಲ್ಲೇ ಇದೇ ಮೊದಲು

For Dai;y Updates Join Our whatsapp Group

ಕೇರಳ: ಕೇರಳದಲ್ಲಿ ಅಪರೂಪದ ಬೆಳವಣಿಗೆಯೊಂದರಲ್ಲಿ, ಬಂಧನದಲ್ಲಿರುವ ಬಿಜೆಪಿ ಕೌನ್ಸಿಲರ್ ಆರ್. ಸುಗತನ್ ಅವರು ವಿಯೂರ್ ಕೇಂದ್ರ ಕಾರಾಗೃಹದಲ್ಲೇ ಕೌನ್ಸಿಲರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಜೈಲಿನಲ್ಲೇ ಜನಪ್ರತಿನಿಧಿಯೊಬ್ಬರು ಪ್ರಮಾಣ ವಚನ ಸ್ವೀಕರಿಸಿರುವ ಮೊದಲ ಘಟನೆ ಇದಾಗಿದೆ.

ತಿರುವನಂತಪುರಂ ಮಹಾನಗರ ಪಾಲಿಕೆಯ ವಯೋಟ್ಟುಕೋಣಂ ವಾರ್ಡ್‌ನಿಂದ ಆಯ್ಕೆಯಾಗಿರುವ ಆರ್. ಸುಗತನ್ ಅವರಿಗೆ ಜೈಲಿನ ಗ್ರಂಥಾಲಯದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮೇಯರ್ ವಿ.ವಿ. ರಾಜೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಸುಗತನ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸುಗತನ್ ಅವರು ಸದ್ಯ ಕೇರಳ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ (KAAPA) ಅಡಿಯಲ್ಲಿ ಬಂಧಿತರಾಗಿ ವಿಯೂರ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ತಾತ್ಕಾಲಿಕ ಬಿಡುಗಡೆಗೆ ರಾಜ್ಯ ಸರ್ಕಾರ ಅನುಮತಿ ನೀಡದ ಕಾರಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ತಾತ್ಕಾಲಿಕ ಬಿಡುಗಡೆ ನೀಡುವುದು ಸಾಧ್ಯವಿಲ್ಲ ಎಂಬ ಸರ್ಕಾರದ ವಾದವನ್ನು ಪರಿಗಣಿಸಿ, ಜೈಲಿನೊಳಗೇ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಕಲ್ಪಿಸುವಂತೆ ಆದೇಶಿಸಿತ್ತು.

ಅದರಂತೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಜೈಲಿನ ಗ್ರಂಥಾಲಯದಲ್ಲಿ ಪ್ರತಿಜ್ಞಾವಿಧಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಅಲ್ಲದೆ, ಕಾರ್ಯಕ್ರಮದ ವರದಿ ಮಾಡಲು ಪತ್ರಕರ್ತರಿಗೂ ಜೈಲು ಪ್ರವೇಶಕ್ಕೆ ಅವಕಾಶ ನೀಡುವಂತೆ ನಿರ್ದೇಶನ ನೀಡಲಾಗಿತ್ತು.

ಈ ಹಿಂದೆ ಸುಗತನ್ ಸೇರಿದಂತೆ ಬಿಜೆಪಿಯ 20 ಕೌನ್ಸಿಲರ್‌ಗಳು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಕಾನೂನುಬದ್ಧ ವಿಧಾನಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಜ್ಞಾವಿಧಿಯನ್ನು ಮರುನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು.

ಅದರಂತೆ ಜುಲೈ 14ರಂದು ತಿರುವನಂತಪುರಂ ಕಾರ್ಪೊರೇಷನ್ ಕಚೇರಿಯಲ್ಲಿ ಮರು ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಅದಕ್ಕೂ ಮುನ್ನ ಸಮಾಜ ವಿರೋಧಿ ಚಟುವಟಿಕೆಗಳ ಆರೋಪದಡಿ ಸುಗತನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ತಾತ್ಕಾಲಿಕ ಬಿಡುಗಡೆಯನ್ನೂ ಸರ್ಕಾರ ನಿರಾಕರಿಸಿದ್ದರಿಂದ, ಹೈಕೋರ್ಟ್ ಆದೇಶದಂತೆ ಅವರು ಜೈಲಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img