HomeCrime News50 ಲಕ್ಷ ರೂ. ವರದಕ್ಷಿಣೆ ಬೇಡಿಕೆ, ಕೊಲೆ ಯತ್ನ ಆರೋಪ: ಸಸ್ಪೆಂಡ್ PSI ವಿರುದ್ಧ ಪತ್ನಿಯ...

50 ಲಕ್ಷ ರೂ. ವರದಕ್ಷಿಣೆ ಬೇಡಿಕೆ, ಕೊಲೆ ಯತ್ನ ಆರೋಪ: ಸಸ್ಪೆಂಡ್ PSI ವಿರುದ್ಧ ಪತ್ನಿಯ ಗಂಭೀರ ದೂರು

For Dai;y Updates Join Our whatsapp Group

ಬೆಂಗಳೂರು: ಉದ್ಯಮಿಯೊಬ್ಬರಿಂದ ₹50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದು ಅಮಾನತುಗೊಂಡಿದ್ದ ಪಿಎಸ್‌ಐ ಬೈರಪ್ಪ ವಿರುದ್ಧ ಇದೀಗ ಪತ್ನಿ ಮತ್ತು ಮಾವನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಪತ್ನಿ ನಗರ ಪೊಲೀಸ್ ಆಯುಕ್ತರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ) ದೂರು ನೀಡಲು ಮುಂದಾಗಿದ್ದಾರೆ.

ವಕೀಲೆಯಾಗಿರುವ ಪತ್ನಿ ನೀಡಿರುವ ಆರೋಪದ ಪ್ರಕಾರ, ಐದು ವರ್ಷಗಳ ಹಿಂದೆ ಬೈರಪ್ಪ ಅವರನ್ನು ವಿವಾಹವಾಗಿದ್ದು, ಆರಂಭದ ಮೂರು ವರ್ಷ ದಾಂಪತ್ಯ ಜೀವನ ಸುಗಮವಾಗಿತ್ತು. ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ಆದರೆ ಬಳಿಕ ಪಿಎಸ್‌ಐ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಮನೆಗೆ ಯುವತಿಯರನ್ನು ಕರೆತರುವುದು ಸೇರಿದಂತೆ ಹಲವು ವಿಚಾರಗಳು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಿದ್ದವು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರಶ್ನಿಸಿದ ಬಳಿಕ, ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ತಂದೆಯ ಮನೆಯಿಂದ ₹50 ಲಕ್ಷ ಹಣ ತಂದುಕೊಡಬೇಕು, ಇಲ್ಲವಾದರೆ ಜೊತೆಯಲ್ಲಿ ಬದುಕುವುದಿಲ್ಲ ಎಂದು ವರದಕ್ಷಿಣೆಗಾಗಿ ಒತ್ತಡ ಹೇರುತ್ತಿದ್ದ ಹಾಗೂ ಹಲ್ಲೆ ನಡೆಸುತ್ತಿದ್ದ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ, ಮೂರು ವರ್ಷದ ಮಗಳು ತನ್ನ ಮಗುವೇ ಅಲ್ಲ ಎಂಬ ಅನುಮಾನ ವ್ಯಕ್ತಪಡಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಜಗಳವಾದಾಗ ಪತ್ನಿ ಹಾಗೂ ಮಗುವನ್ನು ಬಿಟ್ಟು ಮನೆಯಿಂದ ಹೊರಟು ಹೋಗುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.

ಜುಲೈ 12ರಂದು ನಡೆದ ಗಲಾಟೆಯ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಬಂದಿದ್ದ ಮಾವನ ಮೇಲೆಯೇ ಮಚ್ಚು ಹಿಡಿದು ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ, ಪೊಲೀಸರು ಎಫ್‌ಐಆರ್ ದಾಖಲಿಸದೆ ಕೇವಲ ಎನ್‌ಸಿಆರ್ ದಾಖಲಿಸಿ ಕಳುಹಿಸಿದ್ದಾರೆ ಎಂದು ಪತ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಮನೆಯ ಮುಂದೆ ರೌಡಿಗಳನ್ನು ನಿಲ್ಲಿಸಿ ಬೆದರಿಕೆ ಹಾಕುವುದು, ಯುವತಿಯರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಸಂದೇಶ ವಿನಿಮಯ ಮಾಡಿಕೊಳ್ಳುವುದು, ಮದುವೆಯಾಗುವುದಾಗಿ ನಂಬಿಸಿ ಸಂಪರ್ಕ ಬೆಳೆಸುವುದು ಹಾಗೂ ಒಪ್ಪದಿದ್ದರೆ ಬೆದರಿಕೆ ಹಾಕುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಪತ್ನಿ ಮಾಡಿದ್ದಾರೆ. ಕೆಲವು ಯುವತಿಯರೇ ತಮ್ಮ ಚಾಟ್‌ಗಳ ಪ್ರತಿಗಳನ್ನು ಕಳುಹಿಸಿದ್ದು, ಅದರಿಂದ ಈ ವಿಚಾರಗಳು ಬೆಳಕಿಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ಮೋಹನ್ ಮುರುಳಿ ಅವರು ಬೈರಪ್ಪ ಅವರ ಬ್ಯಾಚ್‌ಮೇಟ್ ಆಗಿರುವುದರಿಂದ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂಬ ಆರೋಪವನ್ನೂ ಪತ್ನಿ ಮಾಡಿದ್ದಾರೆ.

ಸದ್ಯ ಪತ್ನಿ ತನ್ನ ಮೂರು ವರ್ಷದ ಮಗುವಿನೊಂದಿಗೆ ತಂದೆಯ ಮನೆಯಲ್ಲಿ ಆಶ್ರಯ ಪಡೆದಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅಧಿಕೃತ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img