ಟೆಹ್ರಾನ್: ಒಮಾನ್ ಕರಾವಳಿ ಸಮೀಪ ಹಾರ್ಮುಜ್ ಜಲಸಂಧಿಯಲ್ಲಿ ಸೈಪ್ರಸ್ ಧ್ವಜ ಹೊತ್ತ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಭಾರತೀಯ ನಾವಿಕ ಹೆರಾಂಬ್ ಕರ್ಮಾರ್ಕರ್ ಅವರ ಕುಟುಂಬಕ್ಕೆ ಕಳುಹಿಸಿದ್ದ ಕೊನೆಯ ಸಂದೇಶ ಇದೀಗ ಮನಕಲಕುವ ಸಂಗತಿಯಾಗಿ ಹೊರಬಂದಿದೆ.
30 ವರ್ಷದ ಹೆರಾಂಬ್ ಕರ್ಮಾರ್ಕರ್, ದಾಳಿ ನಡೆಯುವ ಕೆಲವೇ ಕ್ಷಣಗಳ ಮೊದಲು “ನಾವು ಅಪಾಯದಿಂದ ಪಾರಾಗಿದ್ದೇವೆ. ಹಡಗು ಸುರಕ್ಷಿತವಾಗಿ ಕೊಲ್ಲಿಯನ್ನು ದಾಟಿದೆ” ಎಂದು ಕುಟುಂಬಕ್ಕೆ ಸಂದೇಶ ಕಳುಹಿಸಿದ್ದರು. ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ಹಡಗು ದಾಳಿಗೆ ಒಳಗಾಗಿದ್ದು, ಇದೇ ಸಂದೇಶ ಕುಟುಂಬದೊಂದಿಗೆ ಅವರ ಕೊನೆಯ ಸಂಪರ್ಕವಾಗಿದೆ.
ಭಾನುವಾರ ಒಮಾನ್ ಕರಾವಳಿ ಸಮೀಪದ ಹಾರ್ಮುಜ್ ಜಲಸಂಧಿಯಲ್ಲಿ ‘ಜಿಎಫ್ಎಕ್ಸ್ ಗ್ಯಾಲಕ್ಸಿ’ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದ್ದು, ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಪೈಕಿ ಹೆರಾಂಬ್ ಕರ್ಮಾರ್ಕರ್ ಮೃತಪಟ್ಟಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹೆರಾಂಬ್ ಅವರ ಮಾವ ವಿವೇಕ್ ಟಂಡನ್, “ಅವನಿಗೆ ಕೇವಲ 30 ವರ್ಷ ವಯಸ್ಸು. ಭಾರತ ಸರ್ಕಾರಕ್ಕೆ ನಮ್ಮ ಒಂದೇ ಮನವಿ, ಅವನ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ಭಾರತಕ್ಕೆ ತಂದು ನಮಗೆ ಹಸ್ತಾಂತರಿಸಬೇಕು” ಎಂದು ಕಂಬನಿ ಮಿಡಿದಿದ್ದಾರೆ.
ಈ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಅಂತರರಾಷ್ಟ್ರೀಯ ಸಮುದ್ರ ಸುರಕ್ಷತೆಗೆ ಗಂಭೀರ ಬೆದರಿಕೆ ಎಂದು ಹೇಳಿದೆ.



