ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಮರಬ್ಬಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕರಾಳ ತಾಂಡಾದಲ್ಲಿ ರೈತನೊಬ್ಬನ ಹೊಲದಲ್ಲಿದ್ದ ಸೋಲಾರ್ ಪ್ಲಾಂಟ್ಗಳನ್ನು ಕಿಡಿಗೇಡಿಗಳು ಕಲ್ಲು ತೂರಿ ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ರೈತನಿಗೆ ಉಂಟಾದ ಲಕ್ಷಾಂತರ ರೂಪಾಯಿ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರುನಾಡ ವಿಜಯ ಸೇನೆ ಪದಾಧಿಕಾರಿಗಳು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.
ದೂರು ಸಲ್ಲಿಸಿದ ಬಳಿಕ ಮಾತನಾಡಿದ ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ಪ್ರಕಾಶ್ ಆರ್., ನಕರಾಳ ತಾಂಡಾ ಗ್ರಾಮದ ರೈತ ಹಾಗೂ ಸಂಘಟನೆಯ ತಾಲೂಕು ಜಂಟಿ ಕಾರ್ಯದರ್ಶಿ ಪಾಂಡು ನಾಯ್ಕ್ ಎಲ್. ಅವರು ತಮ್ಮ ಹೊಲದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿಕೊಂಡಿದ್ದರು.
ಆದರೆ, ಹೊಲದ ಪಕ್ಕದಲ್ಲಿರುವ ಮನೆಯೊಂದರಲ್ಲಿ ಕೆಲವರು ಪ್ರತಿನಿತ್ಯ ಅಕ್ರಮವಾಗಿ ಜೂಜಾಟ ನಡೆಸಿ ಮದ್ಯಪಾನ ಮಾಡುತ್ತಿದ್ದು, ಗಲಾಟೆ ವೇಳೆ ಸೋಲಾರ್ ಪ್ಲಾಂಟ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದರು.
ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ
ಕಲ್ಲು ತೂರಾಟದಿಂದ ಸೋಲಾರ್ ಪ್ಯಾನೆಲ್ಗಳು ಸಂಪೂರ್ಣ ಜಖಂಗೊಂಡಿದ್ದು, ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ದುಡಿದು ಅಳವಡಿಸಿಕೊಂಡಿದ್ದ ಆಸ್ತಿಯನ್ನು ಧ್ವಂಸಗೊಳಿಸಿರುವ ಕೃತ್ಯ ಖಂಡನೀಯವಾಗಿದೆ ಎಂದು ಕರುನಾಡ ವಿಜಯ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಜೂಜಾಟ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಕಿಡಿಗೇಡಿಗಳನ್ನು ತಕ್ಷಣ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ರೈತ ಪಾಂಡು ನಾಯ್ಕ್ ಅವರಿಗೆ ಉಂಟಾದ ನಷ್ಟವನ್ನು ತಪ್ಪಿತಸ್ಥರಿಂದಲೇ ವಸೂಲಿ ಮಾಡಿ ಸೋಲಾರ್ ಪ್ಲಾಂಟ್ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈ ಸಂಬಂಧ ಪೊಲೀಸ್ ಠಾಣೆಯ ಪಿಎಸ್ಐ ಉಮಾಪತಿ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ್ ಆರ್., ವಿಶ್ವನಾಥ್ ಹಿಟ್ನಾಳ್, ರಘು ನಾಯ್ಕ್, ಶಿವಕುಮಾರ್ ಎಂ., ಪಾಂಡು ನಾಯ್ಕ್, ಯಶವಂತ್ ಕುಮಾರ್, ಮೋಹನ್ ನಾಯ್ಕ್, ಕಾರ್ತಿಕ್ ಕುಮಾರ್ ಸೇರಿದಂತೆ ಕರುನಾಡ ವಿಜಯ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.



