HomeGadag Newsಹತ್ತಿ ಇಳುವರಿ ಹೆಚ್ಚಿಸಲು ವೈಜ್ಞಾನಿಕ ಕೃಷಿಯೇ ಮಂತ್ರ

ಹತ್ತಿ ಇಳುವರಿ ಹೆಚ್ಚಿಸಲು ವೈಜ್ಞಾನಿಕ ಕೃಷಿಯೇ ಮಂತ್ರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಮಾಗಡಿ ಗ್ರಾಮದಲ್ಲಿ ಧಾರವಾಡ ಹತ್ತಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹತ್ತಿ ಬೆಳೆ ಉತ್ಪಾದಕತೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೈತರಿಗೆ ಹತ್ತಿ ಬೆಳೆಯ ವೈಜ್ಞಾನಿಕ ನಿರ್ವಹಣೆ, ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಉತ್ಪಾದಕತೆ ಹೆಚ್ಚಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಉತ್ತಮ ಗುಣಮಟ್ಟದ ಬೀಜಗಳ ಆಯ್ಕೆ, ಸಮಯೋಚಿತ ಬಿತ್ತನೆ, ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ, ಸಮರ್ಪಕ ನೀರಿನ ನಿರ್ವಹಣೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದರೆ ಹತ್ತಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಬಹುದು ಎಂದು ತಿಳಿಸಿದರು. ಹತ್ತಿ ಬೆಳೆಗೆ ಕಂಟಕವಾಗಿರುವ ಗುಲಾಬಿ ಕಾಯಿಕೊರಕ ಬಾಧೆ ನಿಯಂತ್ರಣ ಕ್ರಮಗಳ ಬಗ್ಗೆಯೂ ವಿವರಿಸಿದರು.

ಧಾರವಾಡ ಹತ್ತಿ ಸಂಶೋಧನಾ ಕೇಂದ್ರದ ಸಸ್ಯ ಕೀಟಶಾಸ್ತ್ರ ವಿಜ್ಞಾನಿಗಳಾದ ಡಾ. ವಿ.ಕೆ. ಶಾನವಾಡ, ಡಾ. ಸುನೀಲ ಕರೀಕಟ್ಟಿ ಹಾಗೂ ಪೂರ್ಣಿಮಾ ಮಟ್ಟಿ ಮಾತನಾಡಿ, ಆರಂಭಿಕ ಹಂತದಿಂದಲೇ ಕೀಟ ಮತ್ತು ರೋಗಗಳ ಮೇಲ್ವಿಚಾರಣೆ ನಡೆಸಬೇಕು. ಗುಲಾಬಿ ಕಾಯಿಕೊರಕ, ಹಸಿರು ಎಲೆಹುಳು, ಬಿಳಿನೊಣ ಸೇರಿದಂತೆ ಪ್ರಮುಖ ಕೀಟಗಳ ನಿಯಂತ್ರಣಕ್ಕೆ ಮೋಹಕ ಬಲೆ ಹಾಗೂ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.

ಕೃಷಿ ಉಪನಿರ್ದೇಶಕಿ ಸ್ಪೂರ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಯಲ್ಲಿರುವ ಈ ಅಭಿಯಾನದ ಉದ್ದೇಶ ಪ್ರತಿ ಎಕರೆಗೆ ಹತ್ತಿ ಉತ್ಪಾದನೆ ಹೆಚ್ಚಿಸುವುದು, ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಪರಿಚಯಿಸುವುದು ಹಾಗೂ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆದಾಯ ಹೆಚ್ಚಿಸುವುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹತ್ತಿ ಬೆಳೆಗಾರ ಚನ್ನಪ್ಪ ಷಣ್ಮುಕಿ ಸೇರಿದಂತೆ ರೈತರು ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ಸಂದೇಹಗಳಿಗೆ ಪರಿಹಾರ ಪಡೆದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರಯ್ಯ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಅಧಿಕಾರಿಗಳಾದ ಶಿವಕುಮಾರ ಕಾಶಪ್ಪನವರ, ರೈತ ಮುಖಂಡರಾದ ಚಂದ್ರಶೇಖರ ಬಿ.ಟಿ., ಬಸವರಾಜ ಪಾಳೇದ, ಉಡಚಪ್ಪ ಕೆ., ನಾಗರಾಜ ಕುಲಕರ್ಣಿ, ಕಸ್ತೂರೆಮ್ಮ ಎಸ್., ಸಾವಿತ್ರಿ ಪಾಳೇದ, ಗೀತಾ ಹೂಗಾರ, ಶ್ರುವಿಕಾ ಭಾನು, ಆತ್ಮ ಯೋಜನೆ ಸಿಬ್ಬಂದಿ, ಪ್ರಗತಿಪರ ರೈತರು ಹಾಗೂ ಮಾಗಡಿ ಗ್ರಾಮದ ಹತ್ತಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಸಮಗ್ರ ಕೀಟ ನಿರ್ವಹಣೆಯನ್ನು ಅಳವಡಿಸಿಕೊಂಡರೆ ಹತ್ತಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ.”

– ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img