ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಧನಂಜಯ ಎಂ. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ರಾಜ್ಯ ಹೆದ್ದಾರಿಯನ್ನು ತಡೆದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ ಸರ್ಕಾರಿ ಪದವಿ ಕಾಲೇಜು ಆರಂಭಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಬಿವಿಪಿ ಗದಗ ಜಿಲ್ಲಾ ಸಂಚಾಲಕ ಅಭಿಷೇಕ ಉಮಚಗಿ, ಲಕ್ಷ್ಮೇಶ್ವರ ತಾಲೂಕು ಕೇಂದ್ರವಾಗಿ ಎಂಟು-ಒಂಬತ್ತು ವರ್ಷಗಳಾದರೂ ಸರ್ಕಾರಿ ಪದವಿ ಕಾಲೇಜು ಆರಂಭವಾಗದಿರುವುದು ವಿಪರ್ಯಾಸ. ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಕಾಲೇಜುಗಳ ಶುಲ್ಕ ಭರಿಸಲು ಸಾಧ್ಯವಾಗದ ಅನೇಕ ವಿದ್ಯಾರ್ಥಿಗಳು ಪಿಯುಸಿ ಬಳಿಕ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಬಿವಿಪಿ ಕಾರ್ಯಕರ್ತೆ ಅನು ಅಣ್ಣಿಗೇರಿ ಮಾತನಾಡಿ, ಹಲವು ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜಿನ ಬೇಡಿಕೆ ಇದ್ದರೂ ಸರ್ಕಾರ ಸ್ಪಂದಿಸಿಲ್ಲ. ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ವಿಶೇಷವಾಗಿ ವಿದ್ಯಾರ್ಥಿನಿಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದು, ಅವರ ಹಿತದೃಷ್ಟಿಯಿಂದ ಕೂಡಲೇ ಸರ್ಕಾರಿ ಪದವಿ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿನಾಯಕ ಕುಂಬಾರ, ಸಾಗರ ಮೆಹರವಾಡೆ, ಪ್ರೀತಂ ರಾಜೋಳಿ, ವಿನಯ ಸಪದಳ, ರತ್ನಾ ಕಮತದ, ಸವಿತಾ ಕರೆಯತ್ತಿನ, ಚೈತ್ರಾ ಕೊರಕೇರಿ, ತೇಜಶ್ವಿನಿ ಅರಳಿ, ಭಾಗ್ಯ ವಡವಿ, ಅಪೇಕ್ಷಾ ಶೇರಸೂರಿ, ಅಪೂರ್ವ ಹವಳದ, ಜ್ಯೋತಿ ಬಾಡಗಿ, ರಮ್ಯಾ ಮಹೇಂದ್ರಕರ, ರಾಜೇಶ್ವರಿ ಪಟ್ಟೇದ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
“2026-27ನೇ ಶೈಕ್ಷಣಿಕ ವರ್ಷದಲ್ಲೇ ಸರ್ಕಾರಿ ಪದವಿ ಕಾಲೇಜು ಆರಂಭಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಲಕ್ಷ್ಮೇಶ್ವರ ಬಂದ್ ನಡೆಸಿ ಉಗ್ರ ಹೋರಾಟ ಕೈಗೊಳ್ಳಲಾಗುವುದು.”
– ಅಭಿಷೇಕ ಉಮಚಗಿ, ಎಬಿವಿಪಿ ಜಿಲ್ಲಾ ಸಂಚಾಲಕ



