ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಚುನಾವಣಾ ಪ್ರಕ್ರಿಯೆಯ ಅರಿವು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ನಗರದ ಮೈಲಾರಪ್ಪ ಮೆಣಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾಲೇಜು ಸಂಸತ್ (ಕ್ಯಾಬಿನೆಟ್) ಚುನಾವಣೆ ಯಶಸ್ವಿಯಾಗಿ ನಡೆಯಿತು.
ಚುನಾವಣೆಗಾಗಿ ಪ್ರತ್ಯೇಕ ಮತಗಟ್ಟೆ, ಮತಪೆಟ್ಟಿಗೆ ಹಾಗೂ ಮತದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ರಹಸ್ಯ ಮತದಾನದ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ, ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಟ್ಟರು.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ನಿತಿನ್ ಪಪ್ಪಣ್ಣವರ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾದರು. ಕ್ರೀಡಾ ಸಚಿವರಾಗಿ ಸೃಜನ್ ಬಳಿಗಾರ ಮತ್ತು ಪಲ್ಲವಿ ಸುನಗಾರ, ಸಾಂಸ್ಕೃತಿಕ ಸಚಿವರಾಗಿ ಹರ್ಷಿತ್ ಎಂ.ಆರ್. ಹಾಗೂ ದಿಶಾ ಹಬೀಬ ಆಯ್ಕೆಯಾದರು.
ಈ ಸಂದರ್ಭದಲ್ಲಿ ಇನ್‌ಸೈಟ್ ಅಕಾಡೆಮಿಯ ಅಧ್ಯಕ್ಷ ಎಸ್.ಜಿ. ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.



