ಬೆಂಗಳೂರು: ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಮಂಜು ಅಲಿಯಾಸ್ ಅಮುಕು ಡುಮುಕು ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ರೆಸ್ಟೋ ಬಾರ್ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದು, ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ಮಾಹಿತಿ ಪ್ರಕಾರ, ಜುಲೈ 9ರ ರಾತ್ರಿ ಮಂಜು ಅಲಿಯಾಸ್ ಅಮುಕು ಡುಮುಕು ರೆಸ್ಟೋ ಬಾರ್ಗೆ ತೆರಳಿ ಊಟ ಹಾಗೂ ಮದ್ಯ ಸೇವಿಸಿದ್ದರು. ಬಳಿಕ ಬಿಲ್ ನೀಡುವಂತೆ ಕೇಳಿದಾಗ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ನಂತರ ಹೊರಗೆ ತೆರಳುತ್ತಿದ್ದ ವೇಳೆ ಮಹಿಳಾ ಸಿಬ್ಬಂದಿ ಪ್ರಶ್ನಿಸಿದಾಗ, ಆಕೆಗೆ ಸೆಲ್ಫಿ ಫೋಟೋ ನೀಡುವಂತೆ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿದ್ದ ಪಬ್ ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.
ಈ ಸಂಬಂಧ ಅಮುಕು ಡುಮುಕು ಹಾಗೂ ಅವರ ಸ್ನೇಹಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



