ಬೆಂಗಳೂರು: ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಳಿತ ಮುಂದುವರಿದಿದೆ. ಬುಧವಾರ ಏರಿಕೆ ಕಂಡಿದ್ದ ಚಿನ್ನದ ದರ, ಗುರುವಾರ (ಜುಲೈ 16) ಮತ್ತೆ ಇಳಿಕೆಯಾಗಿದೆ ಎಂದು ಗುಡ್ರಿಟರ್ನ್ಸ್ ವರದಿ ತಿಳಿಸಿದೆ.
ಇಂದಿನ ದರದ ಪ್ರಕಾರ, 24 ಕ್ಯಾರೆಟ್ ಚಿನ್ನದ ಒಂದು ಗ್ರಾಂಗೆ 28 ರೂಪಾಯಿ ಇಳಿಕೆಯಾಗಿದ್ದು, ಪ್ರತಿ ಗ್ರಾಂ ಬೆಲೆ 14,329 ರೂಪಾಯಿಗೆ ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 280 ರೂಪಾಯಿ ಕುಸಿದು 1,43,290 ರೂಪಾಯಿಯಾಗಿದೆ.
ಇದೇ ವೇಳೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ದಾಖಲಾಗಿದೆ. ಒಂದು ಗ್ರಾಂಗೆ 25 ರೂಪಾಯಿ ಕಡಿಮೆಯಾಗಿದ್ದು, ಪ್ರಸ್ತುತ ಪ್ರತಿ ಗ್ರಾಂ 13,135 ರೂಪಾಯಿಗೆ ಮಾರಾಟವಾಗುತ್ತಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 250 ರೂಪಾಯಿ ಇಳಿದು 1,31,350 ರೂಪಾಯಿಗೆ ತಲುಪಿದೆ.
ಬೆಂಗಳೂರುದಲ್ಲಿ ಇಂದಿನ ದರ
ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂ ಬೆಲೆ 14,329 ರೂಪಾಯಿಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿ 235 ರೂಪಾಯಿಯಲ್ಲೇ ಸ್ಥಿರವಾಗಿದ್ದು, ಪ್ರತಿ ಕೆ.ಜಿ. ಬೆಳ್ಳಿ ಬೆಲೆ 2,35,000 ರೂಪಾಯಿಯಾಗಿದೆ.
ಜುಲೈ ತಿಂಗಳ ಆರಂಭದಲ್ಲಿ 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ 14,078 ರೂಪಾಯಿಯಷ್ಟಿದ್ದರೆ, ತಿಂಗಳ ಮಧ್ಯಭಾಗದಲ್ಲಿ ಅದು 14,700 ರೂಪಾಯಿವರೆಗೆ ಏರಿಕೆ ಕಂಡಿತ್ತು. ಬಳಿಕ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು, ಇದೀಗ 14,329 ರೂಪಾಯಿಗೆ ತಲುಪಿದೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ, ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿನ ಏರಿಳಿತ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿದೆ.
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಸುಂಕದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯಲ್ಲಿ ಬದಲಾವಣೆ ಮಾಡಿದ ಬಳಿಕ ಜಾಗತಿಕ ಷೇರುಪೇಟೆಯಲ್ಲಿ ಅಲ್ಪ ಮಟ್ಟಿನ ಚೇತರಿಕೆ ಕಂಡುಬಂದಿತ್ತು. ಇದರ ಪರಿಣಾಮವಾಗಿ ಚಿನ್ನದ ದರದಲ್ಲೂ ಏರಿಳಿತ ಮುಂದುವರಿದಿದ್ದು, ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ.



