ಹಾವೇರಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹಾವೇರಿ ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು, ಅಕ್ರಮ ಜೂಜಾಟ (ಒಸಿ) ನಡೆಸುವವರು ಹಾಗೂ ಸಾರಾಯಿ ಮಾರಾಟಗಾರರೊಂದಿಗೆ ಪೊಲೀಸರೇ ಕೈಜೋಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ, ರಾಜ್ಯ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂದು ಅವರು ಹೇಳಿದರು.
ಹಾವೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಬೊಮ್ಮಾಯಿ, ಹಾವೇರಿ ಜಿಲ್ಲೆ ಸರ್ವಜ್ಞ, ಕನಕದಾಸ ಮತ್ತು ಶಿಶುನಾಳ ಶರೀಫರಂತಹ ಮಹನೀಯರ ನಾಡಾಗಿದ್ದು, ಶಾಂತಿ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯ ಪರಿಸ್ಥಿತಿ ಹದಗೆಟ್ಟಿದ್ದು, ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಗಡಿಪಾರಾದವರು ಹಾಗೂ ಗೂಂಡಾ ಪಟ್ಟಿಯಲ್ಲಿದ್ದವರೇ ಪೊಲೀಸ್ ಠಾಣೆಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ. ಬಹಿರಂಗವಾಗಿ ಇಸ್ಪೀಟ್ ಅಡ್ಡೆಗಳು ನಡೆಯುತ್ತಿದ್ದು, ಬೀಡಿ ಅಂಗಡಿಗಳಲ್ಲಿ ಒಸಿ ಮತ್ತು ಕಿರಾಣಿ ಅಂಗಡಿಗಳಲ್ಲೇ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂದು ಅವರು ದೂರಿದರು.
ಹಾವೇರಿಯ ಬಹುತೇಕ ಕಾಲೇಜುಗಳ ಸುತ್ತಮುತ್ತ ಡ್ರಗ್ಸ್ ಜಾಲ ಸಕ್ರಿಯವಾಗಿದೆ. ಈ ಕುರಿತು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದಾಗ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಡ್ರಗ್ಸ್ ಪೆಡ್ಲರ್ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಬೊಮ್ಮಾಯಿ ಆರೋಪಿಸಿದರು.
ಡ್ರಗ್ಸ್ ಮಾರಾಟ, ಅಕ್ರಮ ಜೂಜಾಟ ಹಾಗೂ ಸಾರಾಯಿ ದಂಧೆಯಲ್ಲಿ ತೊಡಗಿರುವವರೊಂದಿಗೆ ಪೊಲೀಸರೇ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿರುವಂತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಪೊಲೀಸರ ಬದಲು ಏಜೆಂಟರಿಗೆ ಯೂನಿಫಾರ್ಮ್ ನೀಡಿ ಅಧಿಕಾರ ವಹಿಸಿಬಿಡಿ ಎಂದು ಸರ್ಕಾರವನ್ನು ಟೀಕಿಸಿದರು.



