ಬೆಂಗಳೂರು: ನಕಲಿ ನೇಮಕಾತಿ ಆದೇಶಗಳು, ನಕಲಿ ಸರ್ಕಾರಿ ಇಮೇಲ್ ಐಡಿಗಳು ಹಾಗೂ ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಉದ್ಯೋಗದ ಭರವಸೆ ನೀಡಿ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪುತ್ರಿ ಮತ್ತು ಆಕೆಯ ತಂದೆ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಶಂಶಾದ್ ಬೇಗಂ ಹಾಗೂ ಅವರ ತಂದೆ ಎಂ.ಎ. ಮನ್ಸೂರ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ.
ವಿಚಾರಣೆ ವೇಳೆ ನ್ಯಾಯಾಲಯ, ನಕಲಿ ನೇಮಕಾತಿ ಆದೇಶಗಳು, ನಕಲಿ ಇಮೇಲ್ ಐಡಿಗಳು, ನಕಲಿ ತರಬೇತಿ ಕೇಂದ್ರಗಳು ಮತ್ತು ಸರ್ಕಾರಿ ಇಲಾಖೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಮುಗ್ಧ ಉದ್ಯೋಗಾಕಾಂಕ್ಷಿಗಳನ್ನು ವಂಚಿಸುವವರಿಗೆ ನ್ಯಾಯಾಲಯ ಯಾವುದೇ ರೀತಿಯ ರಕ್ಷಣೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂತಹ ಪ್ರಕರಣಗಳಲ್ಲಿ ಆರೋಪಗಳು ಗಂಭೀರವಾಗಿದ್ದು, ಸಮಗ್ರ ತನಿಖೆ ಅಗತ್ಯವೆಂದು ಪೀಠ ಅಭಿಪ್ರಾಯಪಟ್ಟಿದೆ.
ದೂರಿನಲ್ಲಿ ಆರೋಪಿಗಳ ಕಾರ್ಯವೈಖರಿಯನ್ನು ವಿವರವಾಗಿ ಉಲ್ಲೇಖಿಸಲಾಗಿದ್ದು, ತನಿಖೆ ನಡೆಸಲು ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಿವೆ ಎಂದು ನ್ಯಾಯಾಲಯ ಹೇಳಿದೆ. ಕೇವಲ ಉದ್ಯೋಗದ ಭರವಸೆ ನೀಡಿದ ಆರೋಪ ಮಾತ್ರವಲ್ಲದೆ, ನಕಲಿ ಇಮೇಲ್ ಐಡಿಗಳ ಸೃಷ್ಟಿ, ನಕಲಿ ನೇಮಕಾತಿ ಆದೇಶಗಳ ತಯಾರಿ, ಸರ್ಕಾರಿ ಇಲಾಖೆಗಳ ಹೆಸರಿನ ದುರ್ಬಳಕೆ ಹಾಗೂ ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಿದ ಆರೋಪಗಳು ದೊಡ್ಡ ಮಟ್ಟದ ವಂಚನಾ ಜಾಲದ ಸುಳಿವು ನೀಡುತ್ತವೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ನೇರವಾಗಿ ಮೋಸಕ್ಕೊಳಗಾದ ಯಾವುದೇ ವ್ಯಕ್ತಿ ದೂರು ದಾಖಲಿಸಿಲ್ಲ. ದೂರುದಾರರಿಗೂ ಆರೋಪಿತ ಉದ್ಯೋಗ ಹಗರಣಕ್ಕೂ ಸಂಬಂಧವಿಲ್ಲ. ಈ ಪ್ರಕರಣಗಳು ಹಿಂದಿನ ಕಾನೂನು ವ್ಯಾಜ್ಯಗಳಿಗೆ ಪ್ರತೀಕಾರವಾಗಿ ದಾಖಲಿಸಲಾದ ದೂರುಗಳಾಗಿದ್ದು, ಆದ್ದರಿಂದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವು ಉದ್ಯೋಗಾಕಾಂಕ್ಷಿಗಳಿಂದ ಆನ್‌ಲೈನ್ ಮೂಲಕ ಹಣ ಸಂಗ್ರಹಿಸಲಾಗಿದೆ. ಬಳಿಕ ನಕಲಿ ಇಮೇಲ್ ಐಡಿಗಳ ಮೂಲಕ ನೇಮಕಾತಿ ಆದೇಶಗಳನ್ನು ಕಳುಹಿಸಿ, ಕೋಲ್ಕತ್ತಾ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತದೆ ಎಂದು ಹೇಳಲಾದ ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಲಾಗಿತ್ತು. ನಂತರ ನೇಮಕಾತಿ ಪ್ರಕ್ರಿಯೆ ಹಾಗೂ ತರಬೇತಿ ಕಾರ್ಯಕ್ರಮಗಳು ಸಂಪೂರ್ಣ ನಕಲಿ ಎಂಬುದು ಬೆಳಕಿಗೆ ಬಂದಿತು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಲ್ಲದೆ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ, ತಾವು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದೇವೆ ಎಂದು ಬಿಂಬಿಸಿಕೊಂಡು ಉದ್ಯೋಗಾಕಾಂಕ್ಷಿಗಳಿಂದ ಸುಮಾರು 5.3 ಕೋಟಿ ರೂಪಾಯಿ ಸಂಗ್ರಹಿಸಿರುವ ಆರೋಪವೂ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಸರ್ಕಾರ ತಿಳಿಸಿತು. ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿರುವುದರಿಂದ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದ್ದ ಸರ್ಕಾರದ ವಾದವನ್ನು ಹೈಕೋರ್ಟ್ ಪರಿಗಣಿಸಿ, ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.



