HomeSports News1958ರ ವಿಶ್ವಕಪ್ ಫೈನಲ್ʼನಲ್ಲಿ ಪೀಲೆ ಧರಿಸಿದ್ದ ಟಿ-ಶರ್ಟ್ 47.23 ಕೋಟಿ ರೂ.ಗೆ ಮಾರಾಟ!

1958ರ ವಿಶ್ವಕಪ್ ಫೈನಲ್ʼನಲ್ಲಿ ಪೀಲೆ ಧರಿಸಿದ್ದ ಟಿ-ಶರ್ಟ್ 47.23 ಕೋಟಿ ರೂ.ಗೆ ಮಾರಾಟ!

For Dai;y Updates Join Our whatsapp Group

ನ್ಯೂಯಾರ್ಕ್: ಬ್ರೆಜಿಲ್ ಫುಟ್‌ಬಾಲ್ ದಂತಕಥೆ ಪೀಲೆ 1958ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಧರಿಸಿದ್ದ ಐತಿಹಾಸಿಕ ಜೆರ್ಸಿ (ಟಿ-ಶರ್ಟ್) ಭಾರೀ ಮೊತ್ತಕ್ಕೆ ಹರಾಜಾಗಿದೆ. ಬರೋಬ್ಬರಿ 4.9 ಮಿಲಿಯನ್ ಅಮೆರಿಕನ್ ಡಾಲರ್‌ (ಸುಮಾರು ₹47.23 ಕೋಟಿ) ಬೆಲೆಗೆ ಈ ಜೆರ್ಸಿ ಮಾರಾಟವಾಗಿದ್ದು, ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಅಮೂಲ್ಯ ಸ್ಮರಣಿಕೆಗಳಲ್ಲಿ ಒಂದಾಗಿ ದಾಖಲಾಗಿದೆ.

1958ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಸ್ವೀಡನ್ ವಿರುದ್ಧ ಬ್ರೆಜಿಲ್ 5-2 ಗೋಲುಗಳ ಅಂತರದಲ್ಲಿ ಗೆದ್ದು ತನ್ನ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಆ ಐತಿಹಾಸಿಕ ಪಂದ್ಯದಲ್ಲಿ ಕೇವಲ 17 ವರ್ಷದ ಪೀಲೆ ಧರಿಸಿದ್ದ ನಂಬರ್ 10 ಜೆರ್ಸಿಯೇ ಇದೀಗ ದಾಖಲೆ ಮೊತ್ತಕ್ಕೆ ಹರಾಜಾಗಿದೆ. ಆ ಪಂದ್ಯದಲ್ಲಿ ಪೀಲೆ ಎರಡು ಅದ್ಭುತ ಗೋಲುಗಳನ್ನು ಗಳಿಸಿ ಬ್ರೆಜಿಲ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.

ಈ ಜೆರ್ಸಿ ಫುಟ್‌ಬಾಲ್ ಇತಿಹಾಸದಲ್ಲಿ ಹರಾಜಾದ ಎರಡನೇ ಅತ್ಯಂತ ದುಬಾರಿ ಜೆರ್ಸಿಯಾಗಿದೆ. ಮೊದಲ ಸ್ಥಾನದಲ್ಲಿ ಅರ್ಜೆಂಟೀನಾದ ದಂತಕಥೆ ಡಿಯಾಗೋ ಮರಡೋನಾ ಅವರು 1986ರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಧರಿಸಿದ್ದ ಜೆರ್ಸಿಯಿದ್ದು, ಅದು 2022ರಲ್ಲಿ ಸುಮಾರು ₹89.64 ಕೋಟಿಗೆ ಮಾರಾಟವಾಗಿತ್ತು. ಆ ಪಂದ್ಯದಲ್ಲಿ ಮರಡೋನಾ ಪ್ರಸಿದ್ಧ ‘ಹ್ಯಾಂಡ್ ಆಫ್ ಗಾಡ್’ ಗೋಲು ದಾಖಲಿಸಿದ್ದರು.

ವಿಶೇಷವೆಂದರೆ, ಇದೇ ಪೀಲೆ ಜೆರ್ಸಿ 2004ರಲ್ಲಿ ನಡೆದ ಹರಾಜಿನಲ್ಲಿ ಸುಮಾರು ₹91.5 ಲಕ್ಷಕ್ಕೆ ಮಾರಾಟವಾಗಿತ್ತು. ಎರಡು ದಶಕಗಳ ಅವಧಿಯಲ್ಲಿ ಅದರ ಮೌಲ್ಯ ಹಲವು ಪಟ್ಟು ಹೆಚ್ಚಾಗಿದೆ.

ಪೀಲೆ ತಮ್ಮ ವೃತ್ತಿಜೀವನದಲ್ಲಿ 1958, 1962 ಮತ್ತು 1970ರ ಫಿಫಾ ವಿಶ್ವಕಪ್‌ಗಳನ್ನು ಬ್ರೆಜಿಲ್‌ಗೆ ಗೆಲ್ಲಿಸಿಕೊಟ್ಟ ಏಕೈಕ ಆಟಗಾರ ಎಂಬ ಅಪರೂಪದ ದಾಖಲೆಯನ್ನು ಹೊಂದಿದ್ದಾರೆ. 1958ರ ವಿಶ್ವಕಪ್‌ನಲ್ಲಿ ಒಟ್ಟು ಆರು ಗೋಲುಗಳನ್ನು ಗಳಿಸಿದ್ದ ಅವರು, ವಿಶ್ವಕಪ್ ಫೈನಲ್‌ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು.

1962ರ ವಿಶ್ವಕಪ್‌ನಲ್ಲಿ ಗಾಯದ ಸಮಸ್ಯೆಯ ನಡುವೆಯೂ ಬ್ರೆಜಿಲ್ ಪ್ರಶಸ್ತಿ ಉಳಿಸಿಕೊಂಡಿತ್ತು. ಬಳಿಕ 1970ರ ವಿಶ್ವಕಪ್ ಫೈನಲ್‌ನಲ್ಲಿ ಇಟಲಿ ವಿರುದ್ಧ ನಡೆದ ಪಂದ್ಯದಲ್ಲಿ ಪೀಲೆ ಗೋಲು ದಾಖಲಿಸಿ ಬ್ರೆಜಿಲ್‌ಗೆ 4-1 ಅಂತರದ ಗೆಲುವು ಹಾಗೂ ಮೂರನೇ ವಿಶ್ವಕಪ್ ಪ್ರಶಸ್ತಿ ತಂದುಕೊಟ್ಟಿದ್ದರು.

ಫುಟ್‌ಬಾಲ್ ಲೋಕದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಪೀಲೆ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 2022ರಲ್ಲಿ 82ನೇ ವಯಸ್ಸಿನಲ್ಲಿ ನಿಧನರಾದರು. ಅವರ ವಿಶ್ವಕಪ್ ಫೈನಲ್ ಜೆರ್ಸಿ ಇದೀಗ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img