ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕುಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕಾರ್ಯ ವೇಗವಾಗಿ ಸಾಗುತ್ತಿದ್ದು, ಈಗಾಗಲೇ ಶೇ.75ಕ್ಕೂ ಅಧಿಕ ಪ್ರಗತಿ ಸಾಧಿಸಲಾಗಿದೆ ಎಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ತಿಳಿಸಿದರು.
ಶುಕ್ರವಾರ ಶಿರಹಟ್ಟಿಯ ತಹಸೀಲ್ದಾರ್ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶಿರಹಟ್ಟಿ ತಾಲೂಕಿನ 88, ಲಕ್ಷ್ಮೇಶ್ವರ ತಾಲೂಕಿನ 102 ಹಾಗೂ ಮುಂಡರಗಿ ತಾಲೂಕಿನ 62 ಸೇರಿ ಒಟ್ಟು 252 ಮತಗಟ್ಟೆಗಳಿದ್ದು, 2,30,268 ಮತದಾರರ ಪೈಕಿ 1,74,275 ಮತದಾರರ ಮಾಹಿತಿಯನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇದರೊಂದಿಗೆ ಕ್ಷೇತ್ರದಲ್ಲಿ ಶೇ.75ಕ್ಕೂ ಅಧಿಕ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ಶಿರಹಟ್ಟಿ ತಾಲೂಕಿನ 13, ಲಕ್ಷ್ಮೇಶ್ವರ ತಾಲೂಕಿನ 22 ಹಾಗೂ ಮುಂಡರಗಿ ತಾಲೂಕಿನ 14 ಸೇರಿ ಒಟ್ಟು 49 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ನಗರ ಪ್ರದೇಶಗಳಲ್ಲಿ ಕೆಲವು ತಾಂತ್ರಿಕ ಹಾಗೂ ಕಾರ್ಯನಿರ್ವಹಣೆಯ ಸಮಸ್ಯೆಗಳು ಕಂಡುಬಂದಿದ್ದು, ಅವುಗಳನ್ನು ಶೀಘ್ರ ಸರಿಪಡಿಸುವಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ಸೂಚಿಸಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಬಿಎಲ್ಒಗಳು ಮನೆ ಮನೆಗೆ ತೆರಳಿ ಈಗಾಗಲೇ ವಿತರಿಸಿರುವ ಎನ್ಯುಮರೇಷನ್ ಫಾರ್ಮ್ಗಳನ್ನು ಸಂಗ್ರಹಿಸುತ್ತಿದ್ದು, ಬಾಕಿ ಉಳಿದಿರುವ ಪ್ರಕ್ರಿಯೆಯನ್ನೂ ಶೀಘ್ರ ಪೂರ್ಣಗೊಳಿಸಲಾಗುವುದು. ಮತದಾರರ ಅನುಕೂಲಕ್ಕಾಗಿ ಫಾರ್ಮ್ ಸಲ್ಲಿಕೆಗೆ ಆಗಸ್ಟ್ 8ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಲಕ್ಷ್ಮೇಶ್ವರ ತಹಸೀಲ್ದಾರ್ ಎಂ. ಧನಂಜಯ, ಮುಂಡರಗಿ ತಹಸೀಲ್ದಾರ್ ಯರಿಸ್ವಾಮಿ, ಕಾಂಗ್ರೆಸ್ ಮುಖಂಡ ಎಚ್.ಡಿ. ಮಾಗಡಿ, ಬಿಜೆಪಿ ಮುಖಂಡ ಶಂಕರ ಮರಾಠೆ, ಜೆಡಿಎಸ್ ಮುಖಂಡ ಶರಣಪ್ಪ ಹೂಗಾರ, ಕಾಂಗ್ರೆಸ್ ಮುಖಂಡ ಡಿ.ಡಿ. ಮೊರನಾಳ, ಎಸ್ಡಿಪಿಐ ಪ್ರತಿನಿಧಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.



