ನವದೆಹಲಿ: ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈಕೋರ್ಟ್ ಆದೇಶ ಹಾಗೂ ವೈದ್ಯರ ಸಲಹೆಯಂತೆ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅದರ ಭಾಗವಾಗಿ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸರು, ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಹೈಕೋರ್ಟ್ ನಿರ್ದೇಶನಗಳು ಮತ್ತು ತಜ್ಞ ವೈದ್ಯರ ಸಲಹೆಯನ್ನು ಅನುಸರಿಸಿ ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಜಂತರ್ ಮಂತರ್ ಪ್ರದೇಶವನ್ನು ಶಾಂತಿಯುತವಾಗಿ ತೆರವುಗೊಳಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಹೈಕೋರ್ಟ್ ಆದೇಶ ಜಾರಿಗೆ ತರಲು ಪೊಲೀಸರು ಮುಂದಾದ ವೇಳೆ ಕೆಲ ಪ್ರತಿಭಟನಾಕಾರರು ಅಡ್ಡಿಪಡಿಸಲು ಯತ್ನಿಸಿದ್ದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆದರೂ ಪೊಲೀಸರು ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಿ, ವಾಂಗ್ಚುಕ್ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಸೋನಮ್ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಪ್ರತಿದಿನ ವೈದ್ಯಕೀಯ ತಪಾಸಣೆ ನಡೆಸುವಂತೆ ಹೈಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಶುಕ್ರವಾರ ಆರೋಗ್ಯ ಪರೀಕ್ಷೆ ನಡೆಸಿದ ವೈದ್ಯರು, ಅವರ ಆರೋಗ್ಯದಲ್ಲಿ ತೀವ್ರ ಹಿನ್ನಡೆ ಕಂಡುಬಂದಿದ್ದು, ಪ್ರಮುಖ ಅಂಗಾಂಗಗಳ ಕಾರ್ಯಕ್ಷಮತೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.



