ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬಕ್ಕೆ ಸೇರಿದ ಭೂಮಿಗೂ ಅಂತಿಮ ಅಧಿಸೂಚನೆ ಹೊರಡಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಬಿಡದಿ ಹೋಬಳಿಯ ಹೊಸೂರು ಹಾಗೂ ಬನ್ನಿಗಿರಿ ಗ್ರಾಮಗಳ ಸರ್ವೇ ಸಂಖ್ಯೆಗಳಲ್ಲಿರುವ ಕುಮಾರಸ್ವಾಮಿ ಕುಟುಂಬದ ಒಟ್ಟು 35 ಎಕರೆ ಭೂಮಿ ಯೋಜನೆಯ ವ್ಯಾಪ್ತಿಗೆ ಬಂದಿದೆ. ಇದರಲ್ಲಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿರುವ 31 ಎಕರೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಹೆಸರಿನಲ್ಲಿರುವ 4 ಎಕರೆ ಜಮೀನಿಗೂ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಈ ಬೆಳವಣಿಗೆಯನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು, ಕುಮಾರಸ್ವಾಮಿ ಕುಟುಂಬದ ಭೂ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಪ್ರಸ್ತುತ ಬಿಡದಿ ಟೌನ್‌ಶಿಪ್ ಯೋಜನೆಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ಆದರೆ, ಕಾಂಗ್ರೆಸ್ ಈ ನಿಲುವನ್ನು ಪ್ರಶ್ನಿಸಿ, ಜೆಡಿಎಸ್‌ನ ವಿರೋಧದ ಹಿಂದೆ ರೈತರ ಹಿತಾಸಕ್ತಿಗಿಂತ ಕುಟುಂಬದ ಭೂಮಿಯ ಹಿತಾಸಕ್ತಿಯೇ ಪ್ರಮುಖ ಕಾರಣ ಎಂದು ಆರೋಪಿಸಿದೆ.
“ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ 35 ಎಕರೆ ಭೂಮಿಯೂ ಯೋಜನೆಗೆ ಒಳಪಟ್ಟಿರುವುದರಿಂದಲೇ ಅವರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದು ರೈತರ ಪರ ಹೋರಾಟವಲ್ಲ, ತಮ್ಮ ಕುಟುಂಬದ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ” ಎಂದು ಕಾಂಗ್ರೆಸ್ ಟೀಕಿಸಿದೆ.



