ಶಿವಮೊಗ್ಗ: ವಾರಾಂತ್ಯದ ಪ್ರವಾಸದ ಸಂಭ್ರಮ ಕ್ಷಣಾರ್ಧದಲ್ಲೇ ಶೋಕವಾಗಿ ಮಾರ್ಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಟ್ಟಿನಹೊಳೆ ಗ್ರಾಮದಲ್ಲಿ ನಡೆದಿದೆ. ಕೊಡಚಾದ್ರಿ ಶಿಖರಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಬೆಂಗಳೂರಿನ 28 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದು, ಸ್ನೇಹಿತರಲ್ಲಿ ಆಘಾತ ಮೂಡಿಸಿದೆ.
ಬೆಂಗಳೂರು ಮೂಲದ ಶ್ರೀಕಾಂತ್ ಮೂವರು ಸ್ನೇಹಿತರೊಂದಿಗೆ ಶುಕ್ರವಾರ ಕೊಡಚಾದ್ರಿ ಪ್ರವಾಸಕ್ಕೆ ತೆರಳಿ, ಕಟ್ಟಿನಹೊಳೆ ಗ್ರಾಮದ ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಗ್ಗೆ ಟ್ರೆಕ್ಕಿಂಗ್ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾತ್ರಿ ಏಕಾಏಕಿ ಆರೋಗ್ಯ ಹದಗೆಟ್ಟು ಅವರು ಕುಸಿದು ಬಿದ್ದಿದ್ದಾರೆ.
ತಕ್ಷಣ ಸ್ನೇಹಿತರು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಆಸ್ಪತ್ರೆಗೆ ತಲುಪುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ಸಾವಿನ ಕುರಿತು ತನಿಖೆ ಮುಂದುವರಿಸಿದ್ದಾರೆ.



