ಬೆಳಗಾವಿ: 65.95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಚಿನ್ನದಂಗಡಿ ಮಾಲೀಕನೇ ಪ್ರಕರಣದ ಮಾಸ್ಟರ್ಮೈಂಡ್ ಎಂಬ ಸತ್ಯ ಬೆಳಕಿಗೆ ಬಂದಿದೆ. ವಿಮೆ ಹಣ ಪಡೆಯುವುದು ಮತ್ತು ಅಡವಿಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ವಶಕ್ಕೆ ಪಡೆಯುವ ಉದ್ದೇಶದಿಂದ ಕಳ್ಳತನದ ನಾಟಕ ರೂಪಿಸಿದ್ದ ಆರೋಪಿ ಕೊನೆಗೆ ಸಿಸಿಟಿವಿ ದೃಶ್ಯಗಳಲ್ಲೇ ಸಿಕ್ಕಿಬಿದ್ದಿದ್ದಾನೆ.
ರಾಮದೇವ ಗಲ್ಲಿಯಲ್ಲಿರುವ ವಿಪಿ ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿಯ ಮಾಲೀಕ ಕೃಷ್ಣಾನಂದ ವೇರ್ಣೇಕರ, ಅಂಗಡಿಯಿಂದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳುವಾಗಿದೆ ಎಂದು ಖಡೇಬಜಾರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಯ ಸಂಚು ಬಯಲಾಗಿದೆ.
ಕಳ್ಳತನಕ್ಕೂ ಮುನ್ನ ಕ್ಯಾಮೆರಾ ವ್ಯವಸ್ಥೆಯನ್ನು ಬಂದ್ ಮಾಡಲು ಆರೋಪಿ ಯತ್ನಿಸಿದ್ದ. ಆದರೆ ಡಿಸ್ಪ್ಲೇ ಮಾತ್ರ ಸ್ಥಗಿತಗೊಂಡಿದ್ದು, ಕ್ಯಾಮೆರಾ ನಿರಂತರವಾಗಿ ರೆಕಾರ್ಡ್ ಮಾಡುತ್ತಿತ್ತು. ಪರಿಣಾಮ ಅಂಗಡಿಯೊಳಗಿಂದ ಚಿನ್ನಾಭರಣ ಹಾಗೂ ನಗದನ್ನು ತೆಗೆದು ಸ್ಕೂಟಿಯ ಡಿಕ್ಕಿಗೆ ಸಾಗಿಸುತ್ತಿರುವ ದೃಶ್ಯಗಳು ಪೊಲೀಸರ ಕೈಗೆ ಸಿಕ್ಕಿವೆ. ವಿಚಾರಣೆ ವೇಳೆ ಕೃಷ್ಣಾನಂದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ 519.8 ಗ್ರಾಂ ಚಿನ್ನಾಭರಣ, 31 ಗ್ರಾಂ ಬೆಳ್ಳಿ ಆಭರಣ, 2.83 ಲಕ್ಷ ರೂ. ನಗದು ಹಾಗೂ ಸ್ಕೂಟಿ ಸೇರಿ ಒಟ್ಟು 65.95 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳ್ಳತನದ ಸುಳ್ಳು ದೂರು, ವಿಮೆ ವಂಚನೆ ಹಾಗೂ ಇತರೆ ಕಾನೂನು ಉಲ್ಲಂಘನೆಗಳ ಕುರಿತು ಖಡೇಬಜಾರ್ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.



