ಮಡಿಕೇರಿ: ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಚಿರತೆಯೊಂದು ಮನೆಯ ಸಮೀಪದಿಂದಲೇ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದೆ.
ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಸ್ಥಳೀಯ ನಿವಾಸಿ ಅರುಣ್ ಅವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದೆ. ಬಳಿಕ ಕ್ಷಣಾರ್ಧದಲ್ಲೇ ಮನೆಯ ಸಮೀಪದಲ್ಲಿದ್ದ ಸಾಕು ನಾಯಿಯನ್ನು ಎಳೆದೊಯ್ದಿದೆ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಕಳೆದ ಕೆಲವು ದಿನಗಳಿಂದ ಆಲೂರು ಸಿದ್ಧಾಪುರ ವ್ಯಾಪ್ತಿಯ ಆಲೂರು, ಮಾಲಂಬಿ ಹಾಗೂ ಹೊಸಗುತ್ತಿ ಭಾಗಗಳಲ್ಲಿ ಚಿರತೆಯ ಓಡಾಟ ನಿರಂತರವಾಗಿ ಕಂಡುಬರುತ್ತಿದೆ. ರಾತ್ರಿ ವೇಳೆಯಲ್ಲಿ ಸಾಕು ನಾಯಿಗಳು ಹಾಗೂ ದನದ ಕೊಟ್ಟಿಗೆಯಲ್ಲಿದ್ದ ಕರುಗಳನ್ನು ಬೇಟೆಯಾಡುತ್ತಿರುವ ಘಟನೆಗಳೂ ವರದಿಯಾಗುತ್ತಿವೆ.
ಚಿರತೆಯ ನಿರಂತರ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಅರಣ್ಯ ಇಲಾಖೆ ಕೂಡಲೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.



