ಬೆಂಗಳೂರು: ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಪ್ರಮುಖ ಆರೋಪಿ ಪುಣ್ಯೇಶ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಒಂದು ಬಾಕ್ಸ್ನಲ್ಲಿ ಮೊಟ್ಟೆಗಳನ್ನು ತಂದು ಘಟನೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ಮುಂದುವರಿಸಲಾಗಿದೆ.
ಮೊಟ್ಟೆಗಳನ್ನು ಎಲ್ಲಿಂದ ತರಲಾಗಿತ್ತು, ಘಟನೆ ಪೂರ್ವನಿಯೋಜಿತವಾಗಿತ್ತೇ, ಯಾರಾದರೂ ಸೂಚನೆ ನೀಡಿದ್ದರೇ ಹಾಗೂ ಆರೋಪಿಯೊಂದಿಗೆ ಇನ್ನೂ ಯಾರು ಇದ್ದರು ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಏನಿದು ಪ್ರಕರಣ?
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು.
ಈ ವೇಳೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಕ್ವೀನ್ಸ್ ರಸ್ತೆಯ ಬಳಿ ಕಾರಿನಿಂದ ಇಳಿದಾಗ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಅವರ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಶಾಸಕರನ್ನು ಸುರಕ್ಷಿತವಾಗಿ ಸ್ಥಳದಿಂದ ಕರೆದೊಯ್ದಿದ್ದರು. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.



