ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಸುತ್ತಮುತ್ತ ಮತ್ತೆ ಮಳೆ ಚುರುಕು ಪಡೆದಿದೆ.
ಭಾರೀ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದ್ದು, ಕಳಸ ಬಸ್ ನಿಲ್ದಾಣಕ್ಕೂ ನೀರು ನುಗ್ಗಿದೆ.
ಬುಧವಾರದಿಂದ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ಮಳೆ ನೀರಿನಿಂದ ಸಮಸ್ಯೆ ಎದುರಾಗಿದೆ. ಆದರೆ ಮಳೆಯ ಆಗಮನದಿಂದ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.
ಜುಲೈ ಕೊನೆಯ ಹಂತಕ್ಕೆ ಬಂದರೂ ಮಲೆನಾಡಿನ ಹಲವು ಕೆರೆ-ಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಆಗಸ್ಟ್ ತಿಂಗಳಲ್ಲಾದರೂ ಉತ್ತಮ ಮಳೆಯಾಗಲಿ ಎಂದು ರೈತರು ಹಾಗೂ ಗ್ರಾಮಸ್ಥರು ಕಾತರದಿಂದ ಆಕಾಶದತ್ತ ನೋಡುತ್ತಿದ್ದಾರೆ.
ಮಳೆಯ ಕೊರತೆಯಿಂದ ಆತಂಕದಲ್ಲಿದ್ದ ರೈತರಿಗೆ ಇದೀಗ ಸುರಿಯುತ್ತಿರುವ ಮಳೆ ಕೊಂಚ ನೆಮ್ಮದಿ ತಂದಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಮಲೆನಾಡಿನ ಜನರಿದ್ದಾರೆ.



