ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಇದೀಗ ಬೇಕರಿ ಉದ್ಯಮದ ಮೇಲೂ ಬಿದ್ದಿದೆ.
ತುಪ್ಪ, ಬೆಣ್ಣೆ, ಹಾಲಿನ ಉತ್ಪನ್ನಗಳು, ಅಡುಗೆ ಎಣ್ಣೆ, ಮೈದಾ, ಸಕ್ಕರೆ ಸೇರಿದಂತೆ ಬೇಕರಿ ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಹೆಚ್ಚಳವಾಗಿದೆ.
ಇದರ ಜೊತೆಗೆ ವಿದ್ಯುತ್ ದರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ವೆಚ್ಚ, ಕಾರ್ಮಿಕರ ವೇತನ, ಸಾರಿಗೆ ಹಾಗೂ ಅಂಗಡಿ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಬೇಕರಿ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಳೆಯ ದರದಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಲಾಭವಿರಲಿ, ಮೂಲ ವೆಚ್ಚ ಭರಿಸುವುದೂ ಕಷ್ಟವಾಗುತ್ತಿದೆ ಎಂದು ಬೇಕರಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಉತ್ಪನ್ನಗಳ ದರ ಹೆಚ್ಚಳದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ವಿಶೇಷವಾಗಿ ತುಪ್ಪ ಬಳಸಿ ತಯಾರಿಸುವ ಮೈಸೂರು ಪಾಕ್, ತುಪ್ಪದ ಲಡ್ಡು, ಬಾದೂಷಾ, ಕಾಜು ಸ್ವೀಟ್ಸ್, ಡ್ರೈಫ್ರೂಟ್ ಐಟಂಗಳು ಹಾಗೂ ಪ್ರೀಮಿಯಂ ಕೇಕ್ಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಗುಣಮಟ್ಟದ ತುಪ್ಪ ಬಳಸುವ ಬೇಕರಿಗಳಿಗೆ ಇದರ ಹೊರೆ ಮತ್ತಷ್ಟು ಹೆಚ್ಚಾಗಿದೆ.
ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಬೇಕರಿ ಮಾಲೀಕರು ತಿಳಿಸಿದ್ದಾರೆ. ಕೋವಿಡ್ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಬೇಕರಿ ಉದ್ಯಮಕ್ಕೆ ಇದೀಗ ಕಚ್ಚಾ ವಸ್ತುಗಳ ದರ ಏರಿಕೆ ಮತ್ತೊಂದು ಹೊಡೆತ ನೀಡಿದೆ.
ಗ್ರಾಹಕರನ್ನು ಕಳೆದುಕೊಳ್ಳುವ ಭಯದಿಂದ ಹಲವು ಬೇಕರಿಗಳು ಇದುವರೆಗೆ ದರ ಹೆಚ್ಚಳ ಮಾಡದೆ ನಷ್ಟದಲ್ಲೇ ವ್ಯಾಪಾರ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬೇಕರಿ ಅಸೋಸಿಯೇಷನ್ ಶೀಘ್ರದಲ್ಲೇ ಸಭೆ ನಡೆಸಿ ದರ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸಭೆಯಲ್ಲಿ ಜಿಲ್ಲಾ ಬೇಕರಿ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳೊಂದಿಗೆ ಚರ್ಚಿಸಿ ಹೊಸ ದರ ನಿಗದಿ ಮಾಡುವ ನಿರೀಕ್ಷೆಯಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೇಕರಿ ಉತ್ಪನ್ನಗಳ ಬೆಲೆಯಲ್ಲಿ ಪ್ರತಿ ವಸ್ತುವಿಗೆ ₹3 ರಿಂದ ₹5ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ದರ ಏರಿಕೆ ಜಾರಿಯಾದರೆ ಪ್ರೀಮಿಯಂ ಸ್ವೀಟ್ಸ್ ಹಾಗೂ ತುಪ್ಪ ಆಧಾರಿತ ಉತ್ಪನ್ನಗಳ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದರ ಪರಿಣಾಮ ಸಾಮಾನ್ಯ ಗ್ರಾಹಕರ ಜೇಬಿನ ಮೇಲೂ ಬೀಳಲಿದೆ.



