HomeKarnataka Newsಕಾವೇರಿ ನೀರು ಬಿಡುಗಡೆ ಆದೇಶ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ಕಿಡಿ

ಕಾವೇರಿ ನೀರು ಬಿಡುಗಡೆ ಆದೇಶ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ಕಿಡಿ

For Dai;y Updates Join Our whatsapp Group

ಬೆಂಗಳೂರು: ಪ್ರತಿದಿನ 6 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ನೀಡಿರುವ ನಿರ್ದೇಶನ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಕರ್ನಾಟಕದ ಕಾವೇರಿ ಕಣಿವೆ ಜಲಾಶಯಗಳ ವಾಸ್ತವ ಸ್ಥಿತಿ, ಕುಡಿಯುವ ನೀರಿನ ಅಗತ್ಯ, ರೈತರ ಪರಿಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಕುರಿತು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದು ಕೇವಲ ಆಡಳಿತಾತ್ಮಕ ಲೋಪವಲ್ಲ. ಕರ್ನಾಟಕದ ಜಲ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರ ತೋರಿರುವ ಗಂಭೀರ ನಿರ್ಲಕ್ಷ್ಯ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

15 ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದರೆ ಒಟ್ಟು 7.5 ಟಿಎಂಸಿ ನೀರು ರಾಜ್ಯದಿಂದ ಹೊರಹೋಗಲಿದೆ. ರಾಜ್ಯವೇ ನೀರಿನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಷ್ಟು ಪ್ರಮಾಣದ ನೀರು ಬಿಡುಗಡೆ ಮಾಡುವುದು ಅಸಾಧ್ಯ. ಹೀಗಾಗಿ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಸದ್ಯ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಈ ವೈಫಲ್ಯದ ಹೊಣೆ ಹೊತ್ತು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ. ಪ್ರಾಧಿಕಾರದ ಮುಂದೆ ಕರ್ನಾಟಕದ ಪರವಾಗಿ ಯಾವೆಲ್ಲಾ ಅಂಶಗಳನ್ನು ಮಂಡಿಸಲಾಗಿತ್ತು? ರಾಜ್ಯದ ಜಲಾಶಯಗಳ ನೈಜ ಸ್ಥಿತಿಯ ವರದಿಯನ್ನು ಸಲ್ಲಿಸಲಾಗಿತ್ತೇ? ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ಬೆಂಗಳೂರಿನ ಕುಡಿಯುವ ನೀರು ಹಾಗೂ ಕರ್ನಾಟಕದ ರೈತರ ಮೇಲೆ ಉಂಟಾಗುವ ಪರಿಣಾಮವನ್ನು ಸಮರ್ಪಕವಾಗಿ ವಿವರಿಸಲಾಗಿತ್ತೇ? ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದ ಹಿತಾಸಕ್ತಿ ಕಾಪಾಡಲು ಪ್ರಾಧಿಕಾರದ ಮುಂದೆ ಸರ್ಕಾರ ಮಂಡಿಸಿರುವ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು. ಜಲಾಶಯಗಳ ಲೈವ್ ಸ್ಟೋರೇಜ್, ಒಳಹರಿವು ಹಾಗೂ ಮುಂದಿನ ತಿಂಗಳ ನೀರಿನ ಅಗತ್ಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಲೆಕ್ಕಾಚಾರವನ್ನು ಏಕೆ ಪರಿಣಾಮಕಾರಿಯಾಗಿ ಮಂಡಿಸಲಿಲ್ಲ ಎಂಬುದಕ್ಕೂ ಸರ್ಕಾರ ಉತ್ತರಿಸಬೇಕು ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಹಾಗೂ ರೈತರ ಬೆಳೆಗಳಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಪರಿಗಣಿಸಿ ರಾಜ್ಯದಲ್ಲಿನ ನೀರಿನ ಕೊರತೆಯ ವಾಸ್ತವಾಂಶವನ್ನು ಏಕೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಪರವಾಗಿ ವಾದ ಮಂಡಿಸಿದ ತಾಂತ್ರಿಕ ಹಾಗೂ ಕಾನೂನು ತಂಡದ ಕಾರ್ಯವೈಖರಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಕರ್ನಾಟಕದ ಹಿತಾಸಕ್ತಿಯನ್ನು ಸಮರ್ಪಕವಾಗಿ ಮಂಡಿಸುವಲ್ಲಿ ಯಾರಿಂದ ಲೋಪವಾಗಿದೆ ಎಂಬುದನ್ನು ಗುರುತಿಸಿ, ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಯಾವುದೇ ನೀರು ಬಿಡುಗಡೆ ಆದೇಶ ಬರುವ ಮುನ್ನವೇ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಮಂಡಿಸಲು ಶಾಶ್ವತ ಕಾವೇರಿ ತಾಂತ್ರಿಕ-ಕಾನೂನು ಕಾರ್ಯತಂತ್ರ ರೂಪಿಸಬೇಕು ಎಂದು ಅಶೋಕ್ ಹೇಳಿದ್ದಾರೆ. “ನೀರು ಬಿಡುವುದು, ಆದೇಶ ಬಂದ ನಂತರ ಕಣ್ಣೀರು ಹಾಕುವುದು—ಇದು ರಾಜ್ಯ ಸರ್ಕಾರದ ಕಾವೇರಿ ನೀತಿ ಆಗಬಾರದು” ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ.

ಕಾವೇರಿ ನೀರು ಕರ್ನಾಟಕದ ರೈತರ ಬದುಕು, ಬೆಂಗಳೂರಿನ ಕುಡಿಯುವ ನೀರು ಹಾಗೂ ರಾಜ್ಯದ ಭವಿಷ್ಯದ ಜಲ ಭದ್ರತೆಯ ಪ್ರಶ್ನೆಯಾಗಿದೆ. ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟು ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ.

ಸರ್ಕಾರ ಕೂಡಲೇ ಪ್ರಾಧಿಕಾರದ ಮುಂದೆ ಮರುಪರಿಶೀಲನೆಗೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗಬೇಕು. ಕರ್ನಾಟಕದ ನೀರಿನ ಮೇಲೆ ಮೊದಲ ಹಕ್ಕು ಕರ್ನಾಟಕದ ಜನರದು ಎಂಬ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ಹಾಗೂ ನಿರ್ದಾಕ್ಷಿಣ್ಯವಾಗಿ ಪ್ರತಿಪಾದಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img