HomeEntertainmentಸಿನಿಮಾದಿಂದ ಜನಸೇವೆಯತ್ತ ಧನುಷ್ ಹೆಜ್ಜೆ? ಅಭಿಮಾನಿಗಳಿಗೆ ಕೊಟ್ಟ ಸಂದೇಶವೇ ರಾಜಕೀಯ ಪ್ರವೇಶದ ಸುಳಿವಾ?

ಸಿನಿಮಾದಿಂದ ಜನಸೇವೆಯತ್ತ ಧನುಷ್ ಹೆಜ್ಜೆ? ಅಭಿಮಾನಿಗಳಿಗೆ ಕೊಟ್ಟ ಸಂದೇಶವೇ ರಾಜಕೀಯ ಪ್ರವೇಶದ ಸುಳಿವಾ?

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಬ್ಬ ಸಿನಿಮಾ ತಾರೆ ಎಂಟ್ರಿ ಕೊಡಲಿದ್ದಾರಾ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ನಟ ಧನುಷ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ನೀಡಿದ ಸಮಾಜ ಸೇವೆಯ ಸಂದೇಶ ಹಾಗೂ ತಮ್ಮ ಅಭಿಮಾನಿ ಸಂಘದ ಹೊಸ ಧ್ವಜ ಅನಾವರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದಳಪತಿ ವಿಜಯ್ ಬಳಿಕ ಧನುಷ್ ಕೂಡ ರಾಜಕೀಯ ಅಖಾಡಕ್ಕೆ ಇಳಿಯುವ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಚೆನ್ನೈನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ಧನುಷ್, ತಮ್ಮ ಅಭಿಮಾನಿಗಳ ಒಗ್ಗಟ್ಟನ್ನು ಪ್ರಶಂಸಿಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಒಂದೇ ಉದ್ದೇಶಕ್ಕಾಗಿ ಸೇರುವುದು ದೊಡ್ಡ ಶಕ್ತಿ. ಈ ಶಕ್ತಿಯನ್ನು ಕೇವಲ ಸಿನಿಮಾಗಳಿಗೆ ಮಾತ್ರ ಬಳಸದೆ ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಧನುಷ್ ಹೇಳಿದ್ದಾರೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸ್ಥಳೀಯ ಮಟ್ಟದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವಂತೆ ಅವರು ಅಭಿಮಾನಿಗಳಿಗೆ ಸೂಚಿಸಿದ್ದಾರೆ.

ಧನುಷ್ ಅವರ ಈ ಮಾತುಗಳು ಕೇವಲ ಅಭಿಮಾನಿಗಳಿಗೆ ನೀಡಿದ ಸಲಹೆಯೇ ಅಥವಾ ರಾಜಕೀಯ ಪ್ರವೇಶದ ಮೊದಲ ಹೆಜ್ಜೆಯೇ ಎಂಬ ಚರ್ಚೆ ಈಗ ತಮಿಳುನಾಡಿನಲ್ಲಿ ಜೋರಾಗಿದೆ. ರಕ್ತದಾನ ಶಿಬಿರದ ವೇದಿಕೆಯಲ್ಲಿ ಧನುಷ್ ತಮ್ಮ ಅಭಿಮಾನಿ ಸಂಘದ ಹೊಸ ಧ್ವಜವನ್ನು ಅನಾವರಣ ಮಾಡಿರುವುದು ವಿಶೇಷ ಗಮನ ಸೆಳೆದಿದೆ.

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಸಿನಿಮಾ ಅಭಿಮಾನಿ ಸಂಘಗಳು ರಾಜಕೀಯ ಚಟುವಟಿಕೆಗಳ ಮೊದಲ ಹಂತವಾಗಿರುವ ಹಿನ್ನೆಲೆಯಲ್ಲಿ, ಧನುಷ್ ಅವರ ಈ ಬೆಳವಣಿಗೆಯನ್ನು ರಾಜಕೀಯ ವಿಶ್ಲೇಷಕರು ಗಮನಿಸುತ್ತಿದ್ದಾರೆ.

ನಟ ವಿಜಯ್ ಕೂಡ ರಾಜಕೀಯ ಪ್ರವೇಶಕ್ಕೂ ಮೊದಲು ಅಭಿಮಾನಿ ಸಂಘಗಳ ಮೂಲಕ ಜನಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದರು. ಬಳಿಕ ಪಕ್ಷ ಸ್ಥಾಪಿಸಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದರು. ಇದೀಗ ಧನುಷ್ ಅವರ ಹೆಜ್ಜೆಗಳು ಕೂಡ ಅದೇ ಮಾದರಿಯಲ್ಲಿವೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಧನುಷ್ ಅವರು 2031ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಬಹುದು ಎಂಬ ಚರ್ಚೆಗಳೂ ನಡೆಯುತ್ತಿವೆ.

ಧನುಷ್ ಅವರ ಸಿನಿಮಾ ಪಯಣದಲ್ಲೂ ಜನಪರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ‘ಅಸುರನ್’ನಲ್ಲಿ ಶೋಷಿತರ ಪರ ಧ್ವನಿಯಾಗಿದ್ದ ಅವರು, ‘ಕರ್ಣನ್’ನಲ್ಲಿ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರ ನಿರ್ವಹಿಸಿದ್ದರು.

‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ದಬ್ಬಾಳಿಕೆ ವಿರುದ್ಧ ಹೋರಾಡುವ ಕ್ರಾಂತಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಸಂದೇಶ ಹೊಂದಿರುವ ಸಿನಿಮಾಗಳು, ಅಭಿಮಾನಿ ಸಂಘದ ಚಟುವಟಿಕೆಗಳು ಹಾಗೂ ಜನರೊಂದಿಗೆ ಸಂಪರ್ಕ ಬೆಳೆಸುವ ಪ್ರಯತ್ನ — ಧನುಷ್ ಅವರ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img