ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಗೆ ಧಕ್ಕೆ ತರುವಂತಿದ್ದು, ಅದನ್ನು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ತೀವ್ರವಾಗಿ ಖಂಡಿಸಿದೆ.
ನಗರದ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕಚೇರಿಯಲ್ಲಿ ಸೋಮವಾರ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್. ನಾಗರಕಟ್ಟೆ, ವಿದ್ಯಾರ್ಥಿಗಳ ಹೋರಾಟದ ಸಂದರ್ಭದಲ್ಲಿ ಮಾನವೀಯತೆಯ ನೆಲೆಯಲ್ಲಿ ನೆರವು ನೀಡಿದ ಯುವಕನ ಕುರಿತು ಸಿ.ಟಿ. ರವಿ ನೀಡಿರುವ ಹೇಳಿಕೆ ಜವಾಬ್ದಾರಿಯುತ ಸಾರ್ವಜನಿಕ ಜೀವನಕ್ಕೆ ಶೋಭೆ ತರುವುದಿಲ್ಲ ಎಂದು ಆರೋಪಿಸಿದರು.
ಸಂಪೂರ್ಣ ದೇಶ ವಿದ್ಯಾರ್ಥಿಗಳ ಭವಿಷ್ಯದ ಪರವಾಗಿ ನಿಂತಿರುವ ಸಂದರ್ಭದಲ್ಲಿ, ಧರ್ಮದ ಆಧಾರದಲ್ಲಿ ವ್ಯಕ್ತಿಗಳನ್ನು ಗುರಿಯಾಗಿಸಿ ಮಾತನಾಡುವುದು ಸಮಾಜದಲ್ಲಿ ಅನಗತ್ಯ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಮುಸ್ಲಿಂ ಸಮುದಾಯವನ್ನು ನಿರಂತರವಾಗಿ ಟೀಕಿಸುವ ಮೂಲಕ ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಿಸಲು ಅವಕಾಶ ನೀಡಬಾರದು. ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ತಮ್ಮ ಹೇಳಿಕೆಗಳಲ್ಲಿ ಸಂಯಮ ಮತ್ತು ಜವಾಬ್ದಾರಿಯನ್ನು ಪಾಲಿಸಬೇಕು ಎಂದು ಅವರು ಒತ್ತಾಯಿಸಿದರು.
ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಜಾತ್ಯತೀತ ಸಂಘಟನೆಗಳು ಹಾಗೂ ಮುಸ್ಲಿಂ ಮಹಾಸಭಾದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಂತಹ ಹೇಳಿಕೆಗಳ ವಿರುದ್ಧ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಂಡು ಸಮಾಜದಲ್ಲಿ ಸೌಹಾರ್ದ ಕಾಪಾಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಸಭೆಯಲ್ಲಿ ಜಾಫರ್ ಡಾಲಾಯತ್, ತಾಜುದ್ದೀನ್ ಪಾಪಣ್ಣನವರ್, ಕುತ್ಬುದ್ದೀನ್ ಶೇಖ್, ರಿಯಾಜ್ ಅಹಮದ್ ದೊಡ್ಡಮನಿ, ಕೆ.ಎಲ್. ಕಿತ್ತೂರ, ಎಂ.ಎಂ. ಶಿರಹಟ್ಟಿ, ಭಾಷಾಸಾಬ್ ಖಾಜಿ, ರಫೀಕ್ ಈಟಿ, ರಹೀಂಸಾಬ್ ದೊಡ್ಡಮನಿ, ಮೀರಾಸಾಬ್ ಇರಕಲ್, ಯಾಸಿನ್ ಮುಲ್ಲಾ, ನಿಜಾಮುದ್ದೀನ್ ಕಾಟಾಪುರ, ಆಶಿಫ್ ಶೇಖ್, ಮುಸ್ತಾಕ್ ಬಾಗಲಕೋಟ, ಸಮೀರ್ ಜಮಾದಾರ ಸೇರಿದಂತೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.



